
ರಾಯಚೂರು,ಮಾ.೧೫ – ಶತಶತಮಾನಗಳಿಂದ ಶೋಷಿತ ಸಮುದಾಯವಾದ ಛಲವಾದಿ ಸಮಾಜಕ್ಕೆ ಸಿಗಬೇಕಿದ್ದ ರಾಜಕೀಯ, ಸಾಮಾಜಿಕ ನ್ಯಾಯವನ್ನು ನೀಡುವ ಬಗ್ಗೆ ಇದುವರೆಗೆ ಯಾವ ರಾಜಕೀಯ ಪಕ್ಷವು ನಿರ್ಧಾರ ಕೈಗೊಳ್ಳದೇ ನಮ್ಮ ಸಮಾಜವನ್ನು ಕೇವಲ ಮತ ಹಾಕಿಸಿಕೊಳ್ಳಲು ಸೀಮಿತಗೊಳಿಸಿದ್ದಾರೆ ಈ ಹಿನ್ನಲೆ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಛಲವಾದಿ ಸಮಾಜದ ಮುಖಂಡರಿಗೆ ಟಿಕೆಟ್ ನೀಡಬೇಕು ಎಂದು ಛಲವಾದಿ ಮಹಾಸಭಾ ಮುಖಂಡ ರವೀಂದ್ರನಾಥ ಪಟ್ಟಿ ಆಗ್ರಹಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಸಮಾಜದ ಬಗ್ಗೆ ಎಲ್ಲ ಪಕ್ಷದ ಮೊಸಳೆ ಕಣ್ಣೀರು ಬೇಡ,ರಾಜಕೀಯ ಅಧಿಕಾರ ನೀಡಿ ರಾಜಕೀಯ ಸಾಮಾಜಿಕ ನ್ಯಾಯ ಒದಗಿಸಬೇಕು.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ವೇದಿಕೆಯು ಸಿದ್ಧವಾಗಿದೆ. ಹಿಂದಿನ ಎಸ್.ಸಿ. ಮೀಸಲು ಕ್ಷೇತ್ರವಾದ ದೇವದುರ್ಗದಲ್ಲಿ ಬೇರೆ ಜಿಲ್ಲೆಗಳಿಂದ ವಲಸೆ ಬಂದವರಿಗೆ ಆದ್ಯತೆ ನೀಡಿ ಸ್ಥಳೀಯರನ್ನು ನಿರ್ಲಕ್ಷಿಸಲಾಗಿದೆ. ಕೇವಲ ೩ ಸಲ ಮಾತ್ರ ಸ್ಥಳೀಯರು ಚುನಾಯಿತರಾಗಿದ್ದಾರೆ. ಈಗ ೨೦೦೮ ರಲ್ಲಿ ಲಿಂಗಸೂಗೂರು ಕ್ಷೇತ್ರವು ಪರಿಶಿಷ್ಟ ಜಾತಿ ಮೀಸಲಾತಿ ಕ್ಷೇತ್ರವಾಗಿದ್ದು, ಮೂರು ಚುನಾವಣೆಗಳು ಎದುರಿಸಿ, ೪ನೇ ಚುನಾವಣೆಯ ಹೊತ್ತಿನಲ್ಲಿ ನಾವಿದ್ದರೂ ಇದುವರೆಗೆ ಮೂಲ ಅಸ್ಪೃಷ್ಯ ಸಮಾಜವಾದ ಛಲವಾದಿಗಳಿಗೆ ಎಲ್ಲಾ ರಾಜಕೀಯ ಪಕ್ಷಗಳು ಟಿಕೇಟ್ ನೀಡದೇ ನಮ್ಮ ಸಮಾಜವನ್ನು ರಾಜಕೀಯ ಅಧಿಕಾರದಿಂದ ವಂಚಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಿಂಗಸೂಗೂರು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ೨೦೦೮ ರಲ್ಲಿ ಕಾಂಗ್ರೆಸ್ ಪಕ್ಷ ಎ. ವಸಂತಕುಮಾರ ಅವರಿಗೆ ಟಿಕೇಟ್ ನೀಡಲಾಗಿತ್ತು. ೨೦೧೩, ೨೦೧೮ ರ ಚುನಾವಣೆಗಳಲ್ಲಿ ಮೂಲ ಅಸ್ಪೃಶ್ಯರನ್ನು ಕಡೆಗಣಿಸಿ ಬೇರೆ ಜಿಲ್ಲೆಗಳಿಂದ ವಲಸೆ ಬಂದವರಿಗೆ ಟಿಕೇಟ್ ನೀಡಿ ಜಿಲ್ಲೆಯ ಅಸ್ಪೃಶ್ಯರಿಗೆ ಅನ್ಯಾಯ ಮಾಡಲಾಗಿದೆ.
೨೦೨೩ ರ ಚುನಾವಣೆಯಲ್ಲಿ ನಮ್ಮ ಸಮಾಜದ ಜಿಲ್ಲಾಧ್ಯಕ್ಷ ಕೆ. ನಾಗಲಿಂಗ ಸ್ವಾಮಿ ಇವರು ಬಿ.ಜೆ.ಪಿ.ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದಾರೆ. ಹಾಗೂ ಕಾಂಗ್ರೆಸ್ ಪಕ್ಷದಿಂದ ರಾಜಶೇಖರ ರಾಮಸ್ವಾಮಿಯವರು ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿದ್ದು,ರಾಯಚೂರು ನಗರ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ವೈದ್ಯರಾದ ಡಾ.ರಾಮಪ್ಪ ಇವರಿಗೆ ಆಯಾ ಪಕ್ಷಗಳು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟ್ ನೀಡುವ ಮೂಲಕ ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೆ.ನಾಗಲಿಂಗಸ್ವಾಮಿ,ಜಗನ್ನಾಥ ಸುಂಕಾರಿ,ಭೀಮಣ್ಣ ಮಂಚಾಲ,ಶಶಿಧರ, ತಿಮ್ಮಗೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.