ಮೊಸರು, ಮಜ್ಜಿಗೆ, ಲಸ್ಸಿ ದರ ಏರಿಕೆ ನಾಳೆಯಿಂದ ಜಾರಿ

ಬೆಂಗಳೂರು,ಜು.೧೭- ಹಾಲಿನ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ಜಿಎಸ್‌ಟಿ ವಿಧಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಲ ಮೊಸರು,ಮಜ್ಜಿಗೆ ಮತ್ತು ಲಸ್ಸಿ ದರಗಳನ್ನು ೧ ರೂ. ನಿಂದ ೩ ರೂ.ಗೆ ಹೆಚ್ಚಿಸಿದೆ.
ಪರಿಷ್ಕೃತ ದರಗಳು ನಾಳೆಯಿಂದ ಜಾರಿಗೆ ಬರಲಿದೆ.
ಪ್ರತಿ ಲೀಟರ್ ಮೊಸರಿಗೆ ಈ ಮೊದಲು ೪೩ ರೂ. ಇತ್ತು. ನಾಳೆಯಿಂದ ೪೬ ರೂ. ಆಗಲಿದೆ. ಅರ್ಧ ಲೀಟರ್ ಮೊಸರಿನ ಬೆಲೆ ೨೨ ರೂ.ನಿಂದ ೨೪ ರೂ.ಗೆ ಏರಿಕೆಯಾಗಲಿದೆ.
೨೦೦ ಎಂಎಲ್ ಮಜ್ಜಿಗೆ ಹಾಗೂ ಲಸ್ಸಿ ದರ ೧ ರೂ. ಹೆಚ್ಚಳ ಮಾಡಿದೆ. ಪ್ಯಾಕೆಟ್‌ಗಳ ಮೇಲೆ ಹಳೆಯ ದರಗಳೇ ನಮೂದಾಗಿರುತ್ತವೆ. ಗ್ರಾಹಕರು ಹೊಸದಾಗಿ ನಿಗದಿಪಡಿಸಿರುವಷ್ಟು ದರ ನೀಡಿ ಖರೀದಿಸಬೇಕು ಎಂದು ಕೆಎಂಎಫ್ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.
ಕಳೆದ ತಿಂಗಳು ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ೪೭ನೇ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಹಾಲಿನ ಉತ್ಪನ್ನಗಳು ಹಾಗೂ ಆಹಾರಧಾನ್ಯಗಳಿಗೆ ನೀಡಿದ್ದ ವಿನಾಯಿತಿಯನ್ನು ತೆಗೆದು ಹಾಕುವ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು.
ಈ ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ. ಈಗಾಗಲೇ ಹಣದುಬ್ಬರದಿಂದ ತತ್ತರಿಸಿರುವ ಜನರು ಮುಂಬರುವ ದಿನಗಳಲ್ಲಿ ಅಗತ್ಯ ವಸ್ತುಗಳಿಗೆ ಮತ್ತಷ್ಟು ಹಣ ಹೊಂದಿಸಿಕೊಳ್ಳುವುದು ಅನಿವಾರ್ಯವಾಗಿದೆ.