ಮೊಸರು ದೋಸೆ

ಬೇಕಾಗುವ ಸಾಮಾಗ್ರಿಗಳು:
ಅಕ್ಕಿ : ೨ ಕಪ್
ಮೊಸರು : ಮುಕ್ಕಾಲು ಕಪ್
ನೀರು : ೨ ಕಪ್
ಬೆಲ್ಲ : ಮುಕ್ಕಾಲು ಕಪ್
ಮಜ್ಜಿಗೆ : ೨ ಕಪ್
ಉಪ್ಪು : ರುಚಿಗೆ ತಕ್ಕಷ್ಟು
ಮಾಡುವ ವಿಧಾನ :
೧ ಕಪ್ ಅಕ್ಕಿಯನ್ನು ೨-೩ ಸಲ ನೀರಿನಲ್ಲಿ ತೊಳೆಯಿರಿ.

ಬಾಣಲೆಯಲ್ಲಿ ೧೦ ನಿಮಿಷಗಳ ಕಾಲ ಸ್ವಲ್ಪ ಮಂಡಕ್ಕಿ ತರಹ ಆಗುವ ತನಕ ಹುರಿಯಿರಿ.

ಮುಕ್ಕಾಲು ಕಪ್ ಮೊಸರನ್ನು ತೆಗೆದುಕೊಂಡು ಚೆನ್ನಾಗಿ ಕದಡಿ.

ಅದಕ್ಕೆ ೨ ಕಪ್ ನೀರನ್ನು ಹಾಕಿ ಮತ್ತೆ ಕದಡಿ.
ಇದಕ್ಕೆ ಹುರಿದ ಅಕ್ಕಿಯನ್ನು ಹಾಕಿ ೪ ಗಂಟೆಗಳ ಕಾಲ ನೆನೆಸಿಡಿ.
ಪ್ರತ್ಯೇಕವಾಗಿ ಇನ್ನೊಂದು ಬೋಗುಣಿಯಲ್ಲಿ ಮತ್ತೆ ೧ ಕಪ್ ಅಕ್ಕಿಯನ್ನು ತೆಗೆದುಕೊಂಡು ೪ ಗಂಟೆಗಳ ಕಾಲ ನೆನೆಸಿಡಿ.

ಮೊಸರು ಹಾಗು ನೀರು ಎರಡರಲ್ಲಿಯೂ ಪ್ರತ್ಯೇಕವಾಗಿ ನೆನೆಸಿಟ್ಟ ಅಕ್ಕಿಯನ್ನು ಹಾಗು ಮುಕ್ಕಾಲು ಕಪ್ ಬೆಲ್ಲವನ್ನು ಗ್ರೈಂಡರ್ ಗೆ ಹಾಕಿ ನುಣ್ಣಗೆ ರುಬ್ಬಿ. ಮಜ್ಜಿಗೆಯನ್ನು ಸ್ವಲ್ಪ ಸ್ವಲ್ಪವೇ ಉಪಯೋಗಿಸಿ ಹಿಟ್ಟು ಸರಿ ಹದಕ್ಕೆ ಬರುವಂತೆ ನೋಡಿಕೊಳ್ಳಿ.ಹಿಟ್ಟು ತುಂಬ ತೆಳ್ಳಗಾಗದಂತೆ ನೋಡಿಕೊಳ್ಳಿ.

ತಯಾರಾದ ಹಿಟ್ಟನ್ನು ಒಂದು ಬೋಗುಣಿಗೆ ಹಾಕಿ ಬೋಗುಣಿಯನ್ನು ಮೇಲ್ಗಡೆಯಿಂದ ಗಾಳಿಯಾಡದಂತೆ ಬಿಗಿಯಾಗಿ ಮುಚ್ಚಿ ದೋಸೆ ಹಿಟ್ಟನ್ನು ೧೨ ಗಂಟೆಗಳ ಕಾಲ ಹುದುಗಲು ಬಿಡಿ.

ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಕದಡಿ. ಬೇಕಾದರೆ ಮಜ್ಜಿಗೆಯನ್ನು ಉಪಯೋಗಿಸಿ ಹದವನ್ನು ಸರಿಪಡಿಸಿ.ಕಾವಲಿಯನ್ನು ಬಿಸಿಗಿಟ್ಟು ಎಲ್ಲ ಕಡೆ ಎಣ್ಣೆಯನ್ನು ಸವರಿ ದೋಸೆ ಹಿಟ್ಟನ್ನು ಹುಯ್ದು ವೃತ್ತಾಕಾರವಾಗಿ ಹರಡಿ.

ದೋಸೆಯ ಸುತ್ತಲೂ ಎಣ್ಣೆ ಬಿಡಿ. ಸಣ್ಣ ಅಥವಾ ಮಧ್ಯಮ ಉರಿಯಲ್ಲಿ ದೋಸೆಯ ಎರಡೂ ಬದಿ ಕಾಯುವ ಹಾಗೆ ಬೇಯಿಸಿ.

ಅಲ್ಲಿಗೆ ಮೊಸರು ದೋಸೆ ತಯಾರಾದ ಹಾಗೆ. ಚಟ್ನಿ ಮತ್ತು ಬೆಣ್ಣೆಯೊಂದಿಗೆ ಸೇವಿಸಿ