ಮೊಸರಿನಲ್ಲಿ ಕಲ್ಲು ಹುಡುಕುತ್ತಿರುವ ಕಾಂಗ್ರೆಸ್: ಸಂಸದ ಡಾ.ಜಾಧವ ಟೀಕೆ

ಚಿಂಚೋಳಿ,ನ.22- ಚಿಂಚೋಳಿಯಲ್ಲಿ ಇಪ್ಪತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಕ್ಕರೆ (ಇಥೆನಾಲ್) ಕಾರ್ಖಾನೆ ಸ್ಥಾಪನೆ ಭರದಿಂದ ಸಾಗಿದು,್ದ ಕಾಂಗ್ರೆಸ್ ಮುಖಂಡರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ನಿಮಗೆ ಚಿಂಚೋಳಿ ಜನರ ಮೇಲೆ ಇಷ್ಟೇಕೆ? ಅಲರ್ಜಿ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ ಕಾಂಗ್ರೆಸ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಸಂಸದ ಉಮೇಶ ಜಾಧವ ಸಕ್ಕರೆ ಕಾರ್ಖಾನೆ ಇಷ್ಟು ವರ್ಷ ನನೆಗುದಿಗೆ ಬಿದ್ದಿದ್ದು ಏಕೆ? ಈಗ ರೈತರ ಕಲ್ಯಾಣ ಮತ್ತು ಚಿಂಚೋಳಿಯ ಭವಿಷ್ಯಕ್ಕಾಗಿ ಇಥೆನಾಲ್ ಘಟಕ ಸ್ಥಾಪಿಸುತ್ತಿದ್ದರೂ ಅಪಸ್ವರ ಎತ್ತುತ್ತಿದ್ದೀರಿ ಎಂದು ಆರೋಪಿಸಿದ್ದಾರೆ.
ಕಂಪೆನಿಯಲ್ಲಿ ಎಷ್ಟು ಯುವಕರು ಕೆಲಸ ಮಾಡುತ್ತಿದ್ದಾರೆ ಎಂಬುದು ಕಣ್ತೆರೆದು ನೋಡಿ ಬನ್ನಿ ಉದ್ಯೋಗ ನೀಡಿಲ್ಲ ಎಂದು ಆರೋಪಿಸುವ ನಿಮಗೆ ವಾಸ್ತವಿಕತೆ ಮನದಟ್ಟಾಗುತ್ತದೆ ಎಂದು ಹರಿಹಾಯ್ದಿದ್ದಾರೆ.
ನನಗೆ ಟಿಕೆಟ್ ನೀಡಿದವರು ಯಾರು? ಮತ್ತು ನನ್ನ ರಾಜಕೀಯ ಗುರು (ಗಾಡ್ ಫಾದರ್) ಯಾರೆಂಬುದು ಚಿಂಚೋಳಿ ಮತಕ್ಷೇತ್ರದ ಜನತೆಗೆ ಗೊತ್ತಿದೆ. ಕಾಂಗ್ರೆಸ್ ಮುಖಂಡರು ತಮ್ಮ ಬೆನ್ನು ತಾವು ಚಪ್ಪರಿಸಿಕೊಂಡರೆ ಪ್ರಯೋಜನವಿಲ್ಲ. ನನಗೆ ಮಾಜಿ ಮುಖ್ಯಮಂತ್ರಿ ಎನ್ ಧರ್ಮಸಿಂಗ್ ಅವರು ಆರ್ಶೀವದಿಸದೇ ಹೋಗಿದ್ದರೆ ಇಂದು ನಾನು ಇಲ್ಲಿರುತ್ತಿರಲಿಲ್ಲ.
ಇದು ಚಿಂಚೋಳಿಯ ಮಹಾ ಜನತೆಗೆ ಗೊತ್ತಿರುವ ಸಂಗತಿ ಆದರೆ ಕಾಂಗ್ರೆಸ್ ಮುಖಂಡರು ತಮ್ಮ ನಾಯಕರನ್ನು ಖುಷಿ ಪಡಿಸಲು ಹಾಗೂ ಓಲೈಸಲು ಕಟ್ಟುಕತೆ ಹೇಳುತ್ತಿದ್ದಾರೆ ಎಂದು ಉಮೇಶ ಜಾಧವ ಟೀಕಿಸಿದ್ದಾರೆ.
ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ನೂರಾರು ಜನರ ಕಾಲು ಹಿಡಿದು ಕಂಪೆನಿ ಪುನರಾರಂಭಕ್ಕೆ ನಾನು ಮತ್ತು ನನ್ನ ಮಗ ಶಾಸಕ ಅವಿನಾಶ ಜಾಧವ ಪ್ರಯತ್ನ ಮುಕ್ತ ಮನಸ್ಸಿನಿಂದ ಪ್ರಯತ್ನ ಮಾಡಿದ್ದರ ಫಲ ಸಿಕ್ಕಿದೆ ಆದರೆ ಕಾಂಗ್ರೆಸ್ ಮುಖಂಡರಿಗೆ ಇದು ಬೇಕಾಗಿರಲಿಲ್ಲ ಎನಿಸುತ್ತದೆ. ಈ ಕುರಿತು ಚಿಂಚೋಳಿ ತಾಲ್ಲೂಕಿನ ಜನತೆಗೆ ಸಂಪೂರ್ಣ ಮಾಹಿತಿಯಿದೆ.
ಒಂದು ಒಳ್ಳೆಯ ಕೆಲಸವಾಗುತ್ತಿದ್ದರೆ ಅದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುವ ಮತ್ತು ಅದನ್ನು ಸ್ವೀಕರಿಸುವ ಮನಸ್ಸಿಲ್ಲ. ಬದಲಾಗಿ ಮೊಸರಿನಲ್ಲಿ ಕಲ್ಲು ಹುಡುಕಿದಂತೆ ರೈತರ ಕಲ್ಯಾಣಕ್ಕಾಗಿ ಸ್ಥಾಪಿಸುತ್ತಿರುವ ಎಥೇನಾಲ್ ಘಟಕಕ್ಕೂ ಅಪಸ್ವರ ಎತ್ತಿದ್ದುನಾನು ಖಂಡಿಸುತ್ತೇನೆ ಎಂದಿದ್ದಾರೆ. ಕಾಂಗ್ರೆಸ್ ಮುಖಂಡರೇ ಅಭಿವೃದ್ದಿಗಾಗಿ ರಾಜಕೀಯ ಮಾಡಿ ಆದರೆ ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬೇಡಿ ನಿಮ್ಮನ್ನು ಕ್ಷೇತ್ರದ ಜನರು ಗಮನಸಿಸುತ್ತಿದ್ದಾರೆ ಎಂಬುದು ಮರೆಯಬೇಡಿ ಎಂದರು.
245 ಕೋಟಿ ಮೊತ್ತದ ಹಣವನ್ನು ಕೇವಲ 37 ಕೋಟಿ ರೂಪಾಯಿಗೆ ಇಳಿಸಿದ್ದು ಸಣ್ಣ ಕೆಲಸವಲ್ಲ. ಇಂಡಸ್ಟ್ರಿ ಟ್ರಿಬ್ಯುನಲ್‍ನಲ್ಲೂ ಯಾವುದೇ ತಕರಾರು ಇಲ್ಲದಂತೆ ಮಾಡಿ ಸಮಸ್ಯೆ ಪರಿಹರಿಸಿದ್ದರಿಂದಲೇ ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ ಯತ್ನಾಳ ಸಾವಿರಾರು ಕೋಟಿ ಬಂಡವಾಳ ಹೂಡಿ ದೇಶದ ಅತಿದೊಡ್ಡ ಎಥೆನಾಲ್ ಘಟಕ ಸ್ಥಾಪಿಸುತ್ತಿದ್ದಾರೆ.
ಎಥೆನಾಲ್ ಘಟಕ, ವಿದ್ಯುತ್ ಘಟಕ, ಆಸ್ಪತ್ರೆ, ಶಾಲೆ, ಮಾಲ್ ಮತ್ತು ಗೋಶಾಲೆ, ಇಂಧನ ಕೇಂದ್ರ, ಕೃಷಿ ಸೇವಾ ಕೇಂದ್ರ ಆರಂಭಿಸಲು ಭರದಿಂದ ಕೆಲಸ ನಡೆಸುತ್ತಿದ್ದಾರೆ ಆದರೆ ಕಾಂಗ್ರೆಸ್‍ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಚಿಂಚೋಳಿ ಮತಕ್ಷೇತ್ರದಲ್ಲಿ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿರುವ ಕಾಂಗ್ರೆಸ ಮುಖಂಡರು ಒಳ್ಳೆಯ ಕೆಲಸಗಳಿಗೂ ತಕರಾರು ಎತ್ತುತ್ತಿರುವುದು ನೋಡಿದರೆ ಅವರ ಮನಸ್ಥಿತಿ ಹೇಗಿದೆ ಎಂಬುದು ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ.