ಮೊಳಗಬೇಕಿದೆ ಮತ್ತೊಮ್ಮೆ ಪಾಂಚಜನ್ಯ

ಮೊಳಗಬೇಕಿದೆ ಮತ್ತೊಮ್ಮೆ ಪಾಂಚಜನ್ಯ
ಅನ್ನದಾತನ ಉದರಕ್ಕೆ ಕೊಳ್ಳಿಯಿಟ್ಟು
ದರ್ಪದಿ ಧರೆಯನ್ನಾಳುವ ಧಣಿಗಳ
ವಿರುದ್ಧ ಮೊಳಗಬೇಕಿದೆ ಮತ್ತೊಮ್ಮೆ ಪಾಂಚಜನ್ಯ ||೧||

ದೇಹದ ಬಿಸಿನೆತ್ತರ ಭರತಮಾತೆಯ ಪಾದಕ್ಕೆ ಹರಿಸಿ ಸಕಲರ ನರನಾಡಿಗಳಲಿ
ದೇಶ ಭಕುತಿಯ ಸಂಚಲನ ಮೂಡಿಸಿಭರತ ಮಾತೆಯ ರಕ್ಷಣೆಗೆ
ನಿಂತ ವೀರ ಕಲಿಗಳ ಎದೆಗೆ ಗುಂಡಿಡುವ ದೇಶ ದ್ರೋಹಿಗಳ ವಿರುದ್ಧ
ಮೊಳಗಬೇಕಿದೆ ಮತ್ತೊಮ್ಮೆ ಪಾಂಚಜನ್ಯ ||೨||

ಕಾರಿರುಳ ಕತ್ತಲಲಿ ಮುಗ್ಧ ಕಂದಮ್ಮಗಳ ಕನಸಕಮರಿಸುವ
ರಕ್ತ ಪಿಪಾಸುಗಳ ವಿರುದ್ಧ ಮೊಳಬೇಕಿದೆ ಮತ್ತೊಮ್ಮೆ ಪಾಂಚಜನ್ಯ. ||೩||

ಅಂತರಗವ ಅಡವಿಟ್ಟು ಬಹಿರಂಗಕ್ಕೊಂದು ತೋರ್ಪಡಿಸುವ ತಳಕು ಬಳುಕಿನ ಭಾವವಿಲ್ಲದ
ಬಿಳುಪಿನ ಜನರ ವಿರುದ್ಧ ಮೊಳಗಬೇಕಿದೆ ಮತ್ತೊಮ್ಮೆ ಪಾಂಚಜನ್ಯ ||೪||

ಒಲವಿನಾಸೆಲೆಯಲಿ ನೆಲೆಕಂಡುಕೊಂಡ ಜೀವಗಳಿಗೆ ಜಾತಿಯ ತಿಲಕವಿಟ್ಟು
ಕನಸ ಕಮರಿಸುವವರ ವಿರುದ್ಧ ಮೊಳಗಬೇಕಿದೆ ಮತ್ತೊಮ್ಮೆ ಪಾಂಚಜನ್ಯ ||೫||

ಸಂಚುರೂಪಿಸಿ ಮಿಂಚಿಮರೆಯಾಗಬೇಕೆಂಬ ಸಂಚುಕೋರರ
ವಿರುದ್ಧ ಅನ್ಯಾಯಕ್ಕೆ ಆಮಂತ್ರಣವಿತ್ತು ಸೊಕ್ಕಿದವರ ಸೊಲ್ಲಡಗಿಸಲು
ಮೊಳಗಬೇಕಿದೆ ಮತ್ತೊಮ್ಮೆ ಪಾಂಚಜನ್ಯ. ||೬||

-ಸಂಧ್ಯಾದೀಪ*
(ಶ್ರೀಮತಿ ದೀಪಾ ಗಡಗಿ)
ಕನಕಗಿರಿ