ಮೊರ್ಬಿ ಸೇತುವೆ ದುರಂತ:ಘಟನಾ ಸ್ಥಳಕ್ಕೆ ಮೋದಿ ಭೇಟಿ, ಪರಿಶೀಲನೆ

ಅಹಮದಾಬಾದ್, ನ.1- ಸೇತುವೆ ಕುಸಿದು 47 ಮಕ್ಕಳು ಸೇರಿದಂತೆ 141 ಜನರ ಸಾವಿಗೀಡಾದ ಗುಜರಾತ್ ನ ಮೊರ್ಬಿ ಸೇತುವೆ ಘಟನಾ ಸ್ಥಳಕ್ಜೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಭೇಟಿ ನೀಡಿ ಪರಿಶೀಲಿಸಿದರು.
ಪ್ರಧಾನಿ ಜತೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಇದ್ದರು.
ದುರಂತ ನಡೆದ ಸೇತುವೆಯ ಕೊನೆಯಲ್ಲಿ ನಿಂತು ಪರಿಶೀಲನೆ ನಡೆಸಿದ ಮೋದಿಯವರು, ರಕ್ಷಣಾ ಕಾರ್ಯಾಚರಣೆಯ ಮಾಹಿತಿ ಪಡೆದುಕೊಂಡರು.
ಕೇಬಲ್ ಸೇತುವೆ ಕುಸಿತದ ದುರ್ಘಟನೆಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಿಬ್ಬಂದಿಯ ಜತೆ ಮೋದಿಯವರು ಚರ್ಚೆ ನಡೆಸಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ಒದಗಿಸ ಬೇಕೆಂದು ಅವರು ಸೂಚನೆ ನೀಡಿದರು.
ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೊರ್ಬಿಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.
ಸೇತುವೆ ಕುಸಿತ ದುರಂತ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಐವರು ಸದಸ್ಯರ ಸಮಿತಿಯನ್ನು ರಚಿಸಿದೆ. ಮೋರ್ಬಿ ಸೇತುವೆ ನವೀಕರಿಸಿದ ಒರೆವಾ ಕಂಪನಿಯ ಅಧಿಕಾರಿಗಳು, ಸೇತುವೆ ಟಿಕೆಟ್ ಮಾರಾಟಗಾರರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಒಂಬತ್ತು ಜನರನ್ನು ಈಗಾಗಲೇ ಬಂಧಿಸಲಾಗಿದೆ.