ಮೊರ್ಬಿ ದುರಂತ: ರಕ್ಷಣಾ ಕಾರ್ಯ ಸ್ಥಗಿತ

ಮೊರ್ಬಿ, ನ.೪- ಗುಜರಾತ್ ನ ಮೊರ್ಬಿಯಲ್ಲಿ ೧೪೩ ವರ್ಷಗಳಷ್ಟು ಹಳೆಯದಾದ ತೂಗು ಸೇತುವೆ ಮಚ್ಚು ನದಿಗೆ ಕುಸಿದು ಕನಿಷ್ಠ ೧೩೫ ಜನರನ್ನು ಬಲಿ ತೆಗೆದುಕೊಂಡ ಐದು ದಿನಗಳ ನಂತರ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಯಾವುದೇ ಸಂತ್ರಸ್ತರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿಲ್ಲ. ಹೀಗಾಗಿ ರಕ್ಷಣಾ ಕಾರ್ಯಾಚರಣೆ ಹಿಂಪಡೆಯಲಾಗಿದೆ ಎಂದು ರಾಜ್ಯ ಪರಿಹಾರ ಆಯುಕ್ತ ಹರ್ಷದ್ ಪಟೇಲ್ ತಿಳಿಸಿದ್ದಾರೆ.
“ಸದ್ಯ ನಡೆಯುತ್ತಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ಯಾವುದೇ ನಾಪತ್ತೆಯಾದ ವ್ಯಕ್ತಿಗಳು ಉಳಿದಿಲ್ಲದ ಕಾರಣ, ಎಲ್ಲಾ ತನಿಖಾ ಸಂಸ್ಥೆಗಳೊಂದಿಗೆ ಚರ್ಚಿಸಿದ ನಂತರ ಶೋಧ ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಕಳೆದ ಭಾನುವಾರ ಮೊರ್ಬಿ ಯಲ್ಲಿ ಕೇಬಲ್ ತೂಗು ಸೇತುವೆ ಕುಸಿದು ಜನರು ಮಚ್ಚು ನದಿಗೆ ಧುಮುಕಿದ್ದರಿಂದ ಕನಿಷ್ಠ ೧೩೫ ಜನರು ಸಾವನ್ನಪ್ಪಿದ್ದಾರೆ ಮತ್ತು ೧೦೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ
ಭಾರತೀಯ ಕರಾವಳಿ ಕಾವಲು ಪಡೆ, ಭಾರತೀಯ ನೌಕಾಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸ್ಥಳೀಯ ಆಡಳಿತ ಮತ್ತು ಇತರ ಏಜೆನ್ಸಿಗಳೊಂದಿಗೆ ಮೋರ್ಬಿ ಸೇತುವೆ ಕುಸಿದ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಮೊರ್ಬಿಗೆ ಭೇಟಿ ನೀಡಿ ರಾಜಭವನದಲ್ಲಿ ಮೊರ್ಬಿಯಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ತನಿಖೆಗೆ ಸಮಿತಿ ರಚನೆ
ಸೇತುವೆ ಕುಸಿತದ ಘಟನೆಯ ತನಿಖೆಗಾಗಿ ಗುಜರಾತ್ ಸರ್ಕಾರ ಐದು ಸದಸ್ಯರ ಸಮಿತಿ ರಚಿಸಿದೆ ಮತ್ತು ದುರಂತದಿಂದ ಸಂತ್ರಸ್ತರಾದವರಿಗೆ ಸಾಧ್ಯವಿರುವ ಎಲ್ಲ ಸಹಾಯ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಘಟನೆ ಹಿನ್ನೆಲೆಯಲ್ಲಿ ಒಂಬತ್ತು ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಐವರು ಇನ್ನೂ ತಲೆಮರೆಸಿಕೊಂಡಿದ್ದಾರೆ.
ಸೇತುವೆ ಕುಸಿತದ ದುರಂತಕ್ಕೆ ಕಾರಣರಾದ ಒರೆವಾ ಗುಂಪಿನ ಒಂಬತ್ತು ಜನರ ವಿರುದ್ಧ ಗುಜರಾತ್ ಪೊಲೀಸರು ಐಪಿಸಿ ಸೆಕ್ಷನ್ ೩೦೪ ಮತ್ತು ೩೦೮ (ಅಪರಾಧ ನರಹತ್ಯೆ ಅಲ್ಲ ಕೊಲೆ) ಅಡಿಯಲ್ಲಿ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿರುವ ನಾಲ್ವರಲ್ಲಿ ಇಬ್ಬರು ಒರೆವಾ ಕಂಪನಿಯ ಮ್ಯಾನೇಜರ್ ಗಳಾಗಿದ್ದು, ಏಳು ತಿಂಗಳ ನಿರ್ವಹಣಾ ಕಾಮಗಾರಿಯ ನಂತರ ಸೇತುವೆಯನ್ನು ಸಂದರ್ಶಕರಿಗೆ ತೆರೆದಿದ್ದಾರೆ ಮತ್ತು ಉಳಿದ ಇಬ್ಬರು ಫ್ಯಾಬ್ರಿಕೇಶನ್ ವರ್ಕ್ ಗುತ್ತಿಗೆದಾರರರಾಗಿದ್ದಾರೆ.