ಮೊಬೈಲ್ ಹಾವಳಿಯಿಂದ ಹೊರಬನ್ನಿ

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಏ.8; ಯುವಕ, ಯುವತಿಯರು ಇಂದು ಬರೀ ಮೊಬೈಲ್, ಟಿವಿಗಳ ಹಾವಳಿಗೆ ಮಾರುಹೋಗಿದ್ದು, ಅದರಿಂದ ಹೊರಬಂದು ಕ್ರೀಡೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಸಮಾಜ ಸೇವಕಿ ಎಚ್.ಟಿ.ವನಜಾಕ್ಷಿ ಶಿವಯೋಗಿ ಕರೆ ನೀಡಿದರು. ತಾಲೂಕಿನ ವ್ಯಾಸನತಾಂಡ ಗ್ರಾಮದ ಶ್ರೀ ಸೇವಾಲಾಲ್ ಕ್ರಿಕೆರ‍್ಸ್ ಇವರ ನೇತೃತ್ವದಲ್ಲಿ ಡಾ.ಪುನೀತ್ ರಾಜ್‌ಕುಮಾರ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ 4ನೇ ವರ್ಷದ ಸ್ಟಂಪರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಗ್ರಾಮೀಣ ಕ್ರೀಡೆಗಳಾದ ಕಬ್ಬಡ್ಡಿ, ಖೋ ಖೋ, ಕುಸ್ತಿ, ವಾಲಿಬಾಲ್, ಓಟ, ಜಿಗಿತದಂತಹ ಅನೇಕ ಕ್ರೀಡೆಗಳಲ್ಲಿ ಭಾಗವಹಿಸಿ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು, ಆದರೆ ಇಂದು ಸಾಮಾಜಿಕ ಜಾಲತಾಣಗಳಿಂದ ಯುವಕರು ದಾರಿತಪ್ಪುತ್ತಿದ್ದು, ಕ್ರೀಡೆಯಲ್ಲಿ ನಿರಾಸಕ್ತಿಯನ್ನು ತೋರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಕ್ರೀಡೆ ಎಷ್ಟು ಮುಖ್ಯವೋ ಶಿಕ್ಷಣವು ಅಷ್ಟೇ ಮುಖ್ಯವಾಗಿದ್ದು, ಯುವಕರು ಉತ್ತಮ ಶಿಕ್ಷಣ ಪಡೆಯುವುದರ ಜೊತೆಗೆ ಭವಿಷ್ಯ ರೂಪಿಸಿಕೊಂಡು ಪೋಷಕರಿಗೆ ಹಾಗೂ ಗ್ರಾಮಕ್ಕೆ ಕೀರ್ತಿ ತನ್ನಿ ಎಂದು ಸಲಹೆ ನೀಡಿದರು.ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ವಿವಿಧ ಕಡೆಗಳಿಂದ ಒಟ್ಟು 20 ತಂಡಗಳು ಭಾಗವಹಿಸಿದ್ದವು.ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಸದಸ್ಯರಾದ ಎಲ್.ಸಂತೋಷ್ ಕುಮಾರ, ಅಣ್ಣಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಎಲ್.ಸೋಮಶೇಖರ, ಚತ್ರಾಪತಿ ನಾಯ್ಕ, ಟಿ.ಬಿ.ರಾಜು, ಹೆಚ್.ದೇವೆಂದ್ರ, ಮಂಜುನಾಥ, ಮುಖಂಡರಾದ ಉಮೇಶ್, ರಾಘವೇಂದ್ರ, ಪ್ರಕಾಶನಾಯ್ಕ, ರವಿನಾಯ್ಕ, ಸಂತೋಷ್, ರಮೇಶ, ಕುಮಾರನಾಯ್ಕ, ಕೊಟ್ರೇಶ್ ನಾಯ್ಕ, ಸೇರಿದಂತೆ ಇತರರು ಇದ್ದರು.