ಮೊಬೈಲ್-ಪರ್ಸ್ ಸುಟ್ಟು ಹಾಕಿ ಆತ್ಮಹತ್ಯೆ ಮಾಡಿಕೊಂಡ ರಿಕ್ಷಾ ಚಾಲಕ


ಪುತ್ತೂರು, ಎ.೧೦- ವೃತ್ತಿಯಲ್ಲಿ ಅಟೊ ಚಾಲಕನಾಗಿದ್ದ ಯುವಕನೊಬ್ಬ ತನ್ನ ಮೊಬೈಲ್ ಹಾಗೂ ಪರ್ಸ್ ಸುಟ್ಟು ಹಾಕಿದ ನಂತರ ತನ್ನ ಕೋಣೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಕೆಯ್ಯೂರು ಎಂಬಲ್ಲಿ ನಡೆದಿದೆ.
ಕೆಯ್ಯೂರಿನ ದೇರ್ಲ ನಿವಾಸಿ ವೆಂಕಟ್ರಮಣ ಗೌಡ ಅವರ ಪುತ್ರ ಶಿವರಾಜ್ (೨೭) ಆತ್ಮಹತ್ಯೆ ಮಾಡಿಕೊಂಡ ಯುವಕ. ಎ.೮ರಂದು ರಾತ್ರಿ ಸುಳ್ಯದ ತರವಾಡು ಮನೆಯಲ್ಲಿ ರಾತ್ರಿ ನಡೆದ ದೈವದ ನೇಮೋತ್ಸವಕ್ಕೆ ಹೋಗಿ ಬಂದ ಈತ ನಂತರ ಆತ್ಮಹತ್ಯೆಗೆ ಶರಣಾಗಿದ್ದು, ಎಪ್ರಿಲ್ ೯ ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಮನೆ ಮಂದಿ ತರವಾಡು ಮನೆಗೆ ದೈವ ನೇಮೋತ್ಸವಕ್ಕೆ ಹೋಗಿದ್ದು, ಶಿವರಾಜ್ ತಂಗಿ ಮೇಘನಾ ಅವರು ವಾಪಾಸು ಮನೆಗೆ ಬಂದಿದ್ದರು. ನಂತರ ಶಿವರಾಜ್ ತರವಾಡು ಮನೆಗೆ ಹೋಗಿದ್ದರು. ರಾತ್ರಿ ಸುಮಾರು ೧೨ ಗಂಟೆ ಹೊತ್ತಿಗೆ ಮನೆಗೆ ವಾಪಾಸಾದ ಶಿವರಾಜ್ ಅವರು ಮೊಬೈಲ್ ಹಾಗೂ ಪರ್ಸ್‌ನ್ನು ಸುಟ್ಟು ಹಾಕಿದ್ದು, ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೇಮ ವೈಫಲ್ಯ ಕಾರಣವೇ..!
ಪರೋಪಕಾರಿ ವ್ಯಕ್ತಿ ಎಂದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದ್ದ ಶಿವರಾಜ್ ಲಾಕ್‌ಡೌನ್ ಸಂದರ್ಭದಲ್ಲಿ ಮನೆಮನೆಗೆ ದಿನಸಿ ಸಾಮಾನುಗಳನ್ನು ಮುಟ್ಟಿಸಿ ಮಾನವೀಯತೆ ಮೆರೆದಿದ್ದರು. ಯಾವುದೇ ಚಟಗಳಿಲ್ಲದ ಈತ ಮೊಬೈಲ್ ಹಾಗೂ ಪರ್ಸ್ ಸುಟ್ಟು ಹಾಕಿರುವುದು ಅನುಮಾನಕ್ಕೆ ಕಾರಣವಾಗಿದೆ. ತಾಯಿ ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕಿಯಾಗಿದ್ದು, ಆರ್ಥಿಕ ಸ್ಥಿತಿಯಲ್ಲಿ ಸಮಸ್ಯೆ ಇರಲಿಲ್ಲ. ಹೀಗಾಗಿ ಪ್ರೇಮ ವೈಫಲ್ಯ ಆತ್ಮಹತ್ಯೆಗೆ ಕಾರಣವಾಗಿರುವ ಸಾಧ್ಯತೆ ಕಂಡು ಬಂದಿದೆ. ಈ ವಿಚಾರ ಯಾವುದೇ ಕಾರಣಕ್ಕೂ ತಿಳಿಯಬಾರದು ಎನ್ನುವ ಹಿನ್ನಲೆಯಲ್ಲಿ ಮೊಬೈಲ್ ಹಾಗೂ ಪರ್ಸ್ ಸುಟ್ಟು ಹಾಕಿರಬಹುದು ಎಂದು ಶಂಕಿಸಲಾಗಿದೆ. ಮೃತರು ತಂದೆ, ತಾಯಿ ಯಮುನಾವತಿ ಹಾಗೂ ಇಬ್ಬರು ತಂಗಿಯರನ್ನು ಅಗಲಿದ್ದಾರೆ.