
ಆಲಮಟ್ಟಿ:ಜು.8: ಅಲ್ಲಿ ಶಾಲಾ ಸಂಸತ್ತು ಚುನಾವಣೆ ಸಂಭ್ರಮ ಕಳೆಗಟ್ಟಿತ್ತು. ಸ್ಪರ್ಧಾ ಹುರಿಯಾಳುಗಳ ಪ್ರಚಾರ ವೈಖರಿ ಖದರ್ ವೂ ಜೋರಾಗಿತ್ತು. ಸಾರ್ವತ್ರಿಕ ಚುನಾವಣೆಯ ಎಲ್ಲ ನೇಮಾವಳಿಗಳನ್ನು ಅಚ್ಚುಕಟ್ಟಾಗಿ ಪಾಲಿಸಲಾಗಿತ್ತು. ಚುನಾವಣಾಧಿಕಾರಿಗಳು ಅಧಿಸೂಚನೆ ಹೊರಡಿಸಿ ಸೂಸುತ್ರ ಚುನಾವಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದರು. ಬಂದೋ ಬಸ್ತ ನಡುವೆ ಶಾಂತಿಯುತವಾಗಿ ಚುನಾವಣೆ ನಡೆಯಿತು. ಸರದಿ ಸಾಲಿನಲ್ಲಿ ಮತದಾರ ಪ್ರಭುಗಳಾಗಿದ್ದ ಶಾಲಾ ಮಕ್ಕಳು ತಮ್ಮ ಮತ ಹಕ್ಕು ಚಲಾಯಿಸಿ ಸಂಭ್ರಮಿಸಿದರು. ನವೋಲ್ಲಾಸದ ಅನುಭವ ಪಡೆದು ಖುಷಿಯಲ್ಲಿ ತೇಲಿದರು. ನೆಚ್ಚಿನ ನಾಯಕರಿಗೆ(ವಿದ್ಯಾರ್ಥಿಗಳಿಗೆ) ಮತ ದೀಕ್ಷೆ ನೀಡಿ ಕೇಕೆ ಹಾಕಿದರು !
ಇಲ್ಲಿನ ಮಂಜಪ್ಪ ಹರ್ಡೇಕರ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಪ್ರಸಕ್ತ ಸಾಲಿನ ಶಾಲಾ ಸಂಸತ್ ಚುನಾವಣಾ ಪ್ರಕ್ರಿಯೆಯಲ್ಲಿ ಕಂಡು ಬಂದ ವಿಶೇಷ ದೃಶ್ಯಗಳಿವು.
ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವ ದಿಸೆಯಲ್ಲಿ ಶಾಲಾ ಸಂಸತ್ತಿನ ರಚನೆಯನ್ನು ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಜಾರಿಗೆ ತರಲಾಗಿದೆ ಎಂದು ಮುಖ್ಯೋಪಾಧ್ಯಾಯ ಎಸ್.ಆಯ್.ಗಿಡ್ಡಪ್ಪಗೋಳ ಹೇಳಿದರು.
ಮಕ್ಕಳಿಗೆ ಸಾರ್ವತ್ರಿಕ ಚುನಾವಣೆಯ ನೈಜತೆಯ ಪರಿಕಲ್ಪನೆ ಮೂಡಿಸುವ ನಿಟ್ಟಿನಲ್ಲಿ ಇಲ್ಲಿ ವಿಶೇಷವಾಗಿ ಚುನಾವಣಾ ಪ್ರಕ್ರಿಯೆ ಕೈಗೊಳ್ಳಲಾಯಿತು. ಅಣುಕು ಮತದಾತನದ ಮೂಲಕ ಎಲ್ಲ ನಿಯಮಬದ್ಧ ಪ್ರಕ್ರಿಯೆ ನಡೆಸಿ ಹೊಸ ಅನುಭವ ಮೂಡಿಸಲು ಪ್ರಯತ್ನಿಸಿದ್ದೆವೆ. ಪ್ರಾಯೋಗಿಕವಾಗಿ
ಮೊಬೈಲನಲ್ಲಿ ಮತಯಂತ್ರವನ್ನು ಡೌನಲೋಡ ಮಾಡಿಕೊಂಡು, ಅಭ್ಯರ್ಥಿಗಳ ಫೋಟೋ ಹೆಸರು ಸಹಿತ ಮತಯಂತ್ರದ ಸಹಾಯದಿಂದ ವಿದ್ಯಾರ್ಥಿಗಳು ಮೊಬೈಲ್ ನಲ್ಲಿಯೇ ಮತದಾನ ಮಾಡುವುದು ವಿಶೇಷವಾಗಿತ್ತು. ಮಕ್ಕಳಿಗೆ ಇದು ಖುಷಿ ಕೊಟ್ಟಿತ್ತು ಎಂದರು.
ಎಂ.ಎಚ್.ಬಳಬಟ್ಟಿ ಮಾತನಾಡಿ, ಭಾರತ ವಿಶ್ವದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಮ್ಮೆಗೆ ಭಾಜನವಾಗಿದೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳ ಹಕ್ಕು, ಕತ್ರ್ಯವ್ಯಗಳ ಬಗ್ಗೆ ಪ್ರತಿಯೊಬ್ಬ ಭಾರತೀಯ ಅರಿತುಕೊಳ್ಳಬೇಕಾದದ್ದು ಅವಶ್ಯ ಆ ನಿಟ್ಟಿನಲ್ಲಿ ಶಾಲಾ ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಪ್ರಜಾಪ್ರಭುತ್ವದ ಮಹತ್ವ ಅರ್ಥೈಸಿಕೊಳ್ಳಬೇಕು ಎಂದರು.
ಸಾರ್ವತ್ರಿಕವಾಗಿ ಜರುಗುವ ಮಹಾ ಚುನಾವಣೆಗಳ ಮಾದರಿಯಲ್ಲಿಯೇ ಎಲ್ಲ ಹಂತಗಳನ್ನು ಬಳಸಿ ಶಾಲಾ ಸಂಸತ್ ಚುನಾವಣಾ ಪ್ರಕ್ರಿಯೆ ಅಣಕು ಮತದಾನದ ಮೂಲಕ ನಡೆಸಲಾಯಿತು.
ಶಾಲಾ ಸಂಸತ್ ರಚನೆಗಾಗಿ ಈ ಚುನಾವಣೆಯಲ್ಲಿ ಚುನಾವಣೆ ನಡೆಸಲು ಅಧಿಸೂಚನೆ, ದಿನಾಂಕ-ಘೋಷಣೆ, ನಾಮಪತ್ರ ಸಲ್ಲಿಕೆ, ನಾಮಪತ್ರಗಳ ಪರಿಶೀಲನೆ, ಪ್ರಚಾರಕ್ಕಾಗಿ ಸಮಯ ನಿಗದಿ,ಮತಗಟ್ಟೆ ಸ್ಥಾಪನೆ, ಮತದಾನ ಪ್ರಕ್ರಿಯೆಕ್ಕಾಗಿ ಪ್ರಿಸೈಡಿಂಗ್ ಮತ್ತು ಪೋಲಿಂಗ ಆಫೀಸರುಗಳಿಗೆ ಕರ್ತವ್ಯ ಹಂಚಿಕೆ, ಮತಗಟ್ಟೊಳಗೆ ನಿಯಂತ್ರಣ, ಮತದಾರರ ಯಾದಿ, ವೋಟಿಂಗ್ ಕಂಪಾರ್ಟಮೆಂಟ್ ರಚನೆ ಮಾಡಲಾಗಿತ್ತು.
ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು ತಮ್ಮ ಗುರುತಿನ ಆಧಾರಕಾರ್ಡದೊಂದಿಗೆ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಿದರು. 27 ಉಮೇದುದಾರರು ಈ ಚುನಾವಣೆಯಲ್ಲಿ ಆಯ್ಕೆ ಬಯಸಿ ಸ್ಪರ್ಧಾಕಣದಲ್ಲಿದ್ದರು. ಬಿರುಸಿನ ಪ್ರಚಾರದೊಂದಿಗೆ ಮತಯಾಚಿಸಿದರು. ಶಾಲೆಯ ಅಗತ್ಯಕ್ಕೆ ತಕ್ಕಂತೆ ಪ್ರಧಾನ ಮಂತ್ರಿ,ಉಪಪ್ರಧಾನಿ, ಮಹಿಳಾ ಪ್ರತಿನಿಧಿ ವಾಚನಾಲಯ,ಕ್ರೀಡಾ, ಸಾಂಸ್ಕ್ರತಿಕ ಹಾಗೂ ಪ್ರವಾಸ,ಪರಿಸರ,ಆಹಾರ ಸ್ವಚ್ಛತಾ,ಆರೋಗ್ಯ,ವಿಜ್ಞಾನ, ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು.
ಈ ಪ್ರಮುಖ ಹುದ್ದೆಗಾಗಿ ಜರುಗಿದ ಚುನಾವಣೆಯಲ್ಲಿ ಶೇ 90 ರಷ್ಟು ಮತದಾನವಾಯಿತು. ಶಾಲಾ ಸ್ಕೌಟ್ ಅಧಿಕಾರಿ ಎಂ.ಎಚ್.ಬಳಬಟ್ಟಿ ನೇತ್ರತ್ವದಲ್ಲಿ ಸ್ಕೌಟದ ವಿದ್ಯಾರ್ಥಿಗಳು ಮುಂಜಾಗ್ರತಾ ಕ್ರಮವಾಗಿ ಯಾವುದೇ ತೊಂದರೆವಾಗದಂತೆ ಬಿಗಿ ಬಂದೊಬಸ್ತ ನಡೆಸಿದರು. ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಮುಖ್ಯೋಪಾಧ್ಯಾಯ ಎಸ್.ಐ.ಗಿಡ್ಡಪ್ಪಗೋಳ. ಮತಗಟ್ಟೆ ಅಧಿಕಾರಿಯಾಗಿ ಎಂ.ಎಚ್.ಬಳಬಟ್ಟಿ, ಮಹೇಶ ಗಾಳಪ್ಪಗೋಳ. ಪೋಲಿಂಗ್ ಅಕಾರಿಗಳಾಗಿ ಜಗದೇವಿ ಕೆ, ಯು.ಎ.ಹಿರೇಮಠ,ಜಿ.ಎಂ.ಹಿರೇಮಠ, ಕಾರ್ಯನಿರ್ವಹಿಸಿದರು.
ಸ್ಪರ್ಧಾಳುಗಳ ಜಯ ಭವಿಷ್ಯ ಇದೀಗ ಮತಯಂತ್ರದಲ್ಲಿ ಅಡಗಿದೆ. ಸೋಮವಾರ ಚುನಾವಣಾ ಫಲಿತಾಂಶ ಹೊರಬೀಳಲಿದ್ದು ಯಾರ ಕೊರಳಿಗೆ ವಿಜಯಮಾಲೆ ಲಭಿಸುತ್ತದೆ ಹಾಗೂ ಪ್ರಧಾನ ಮಂತ್ರಿಯಾಗಿ ಯಾರು ಆಯ್ಕೆಯಾಗುತ್ತಾರೆ ಎಂಬುದು ಈಗ ಕೌತಕವಾಗಿದೆ. ಗುರು-ಶಿಷ್ಯರ ಬಳಗದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು ಇದಕ್ಕೆಲ್ಲ ಸೋಮವಾರ ತೆರೆ ಬೀಳಲಿದೆ. ಅಲ್ಲಿಯವರೆಗೆ ಕಾಯಬೇಕಷ್ಟೇ !