
ಬೆಂಗಳೂರು, ಏ ೩-ಮೊಬೈಲ್‌ಇಲ್ಲದೆ ಜೀವನವಿಲ್ಲ ಎಂಬಂತಾಗಿದೆ ಜಗತ್ತು. ಬೆಳಗಿನ ಅಲಾರಂ, ಫುಡ್ ಆರ್ಡರ್, ಎಕ್ಸರ್‌ಸೈಸ್, ಶಾಪಿಂಗ್, ಹೀಗೆ ಎಲ್ಲಾ ವಿಚಾರಕ್ಕೂ ಎಲ್ಲರೂ ಮೊಬೈಲ್‌ನ್ನೇ ಅವಲಂಬಿಸುತ್ತಿದ್ದಾರೆ.
ಯವ ಜನಾಂಗ ಅಂತೂ ಟಿವಿ ಮುಂದೆ ಕೂರೋದು ಕಡಿಮೆ. ಹೊಸ ಮೂವಿ, ವೆಬ್‌ಸಿರೀಸ್ ಅಂತ ಮೂರೂ ಹೊತ್ತು ಮೊಬೈಲ್‌ಗೆ ಅಂಟಿಕೊಂಡಿರುತ್ತಾರೆ. ಎದ್ದಾಗ, ಕುಳಿತಾಗ, ಸ್ನಾನ ಮಾಡುವಾಗ, ಊಟ ಮಾಡುವಾಗ, ಮಲಗುವಾಗ ಹೀಗೆ ಯಾವಾಗಲೂ ಮೊಬೈಲ್ ಅಂತೂ ಪಕ್ಕ ಇರಲೇಬೇಕು. ಅಂತಹ ಸನ್ನಿವೇಶ ನಿರ್ಮಾಣವಾಗಿದೆ.
ಇತ್ತೀಚಿನ ಸಮೀಕ್ಷೆ ಪ್ರಕಾರ ಹೆಚ್ಚಿನ ಬೆಂಗಳೂರಿಗರು ತಮ್ಮ ಮೊಬೈಲ್ ಫೋನ್‌ಗಳಿಂದ ಬೇರ್ಪಡಿಸಲಾಗದಷ್ಟು ಮುಳಗಿ ಹೋಗುತ್ತಿದ್ದಾರೆ . ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇ. ೯೧ರಷ್ಟು ಜನರು ಮಲಗುವ ಮೊದಲು ಹಾಸಿಗೆಯಲ್ಲಿ ಬಳಸುತ್ತಾರೆ ಎಂಬ ವಿಷಯ ಬಹಿರಂಗವಾಗಿದೆ.
ಶೇ. ೩೮ರಷ್ಟು ಜನರು ಮಲಗಿರುವಾಗ ಸಾಮಾಜಿಕ ಮಾಧ್ಯಮವನ್ನು ಬ್ರೌಸ್ ಮಾಡಿದರೆ, ಶೇ. ೨೯ರಷ್ಟು ಜನರು ಕೆಲಸದಿಂದ ವಜಾಗೊಳಿಸಿದಕ್ಕೆ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದಾರೆ ಎಂದು ಹೇಳಲಾಗಿದೆ.
ಹಾಸಿಗೆ ತಯಾರಕ ವೇಕ್‌ಫಿಟ್‌ನಿಂದ ಫೆಬ್ರವರಿ ೨೦೨೨ ರಿಂದ ಮಾರ್ಚ್ ೨೦೨೩ ರವರೆಗೆ ಬೆಂಗಳೂರು ಮತ್ತು ದೇಶದ ಉಳಿದ ಭಾಗಗಳಲ್ಲಿ ನಡೆಸಿದ ‘ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್‌ಕಾರ್ಡ್’ ಎಂಬ ಶೀರ್ಷಿಕೆಯ ನಿದ್ರೆಯ ಸಮೀಕ್ಷೆಯಲ್ಲಿ ಈ ಅಂಕಿಅಂಶಗಳು ಬಹಿರಂಗಗೊಂಡಿದೆ.
ಕುತೂಹಲಕಾರಿಯಾಗಿ ವಿಚಾರ ಎಂದರೆ ಶೇ. ೩೨ ರಷ್ಟು ಜನರು ಹಾಸಿಗೆಯನ್ನು ಹೊರತುಪಡಿಸಿ ಇತರ ಸ್ಥಳಗಳಲ್ಲಿ ಮಲಗಿದ್ದಾರೆ. ಏತನ್ಮಧ್ಯೆ, ಪ್ರತಿಕ್ರಿಯಿಸಿದವರಲ್ಲಿ ಶೇ. ೪೦ ರಷ್ಟು ಜನರು ಮಲಗುವ ಕೋಣೆಯ ವಾತಾವರಣವು ಅವರ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ, ಆದರೆ ಶೇ. ೨೦ ರಷ್ಟು ಜನರು ಉತ್ತಮ ಹಾಸಿಗೆ ತಮ್ಮ ನಿದ್ರೆಯನ್ನು ಸುಧಾರಿಸುತ್ತದೆ ಎಂದು ನಂಬಿದ್ದಾರೆ. ನಗರದಲ್ಲಿ ನಿದ್ದೆಯಿಲ್ಲದ ಶೇ. ೨೬ರಷ್ಟು ಜನರು ನಿದ್ರಾಹೀನತೆಯಿಂದ ಬಳಲುತ್ತಿರುವುದು ಕಂಡು ಬಂದಿದೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋಸೈನ್ಸ್‌ನಲ್ಲಿ (ನಿಮ್ಹಾನ್ಸ್) ಕ್ಲಿನಿಕಲ್ ಸೈಕಾಲಜಿ ಪ್ರೊಫೆಸರ್ ಮತ್ತು ಸರ್ವಿಸಸ್ ಫಾರ್ ಹೆಲ್ತಿ ಯೂಸ್ ಆಫ್ ಟೆಕ್ನಾಲಜಿ ಕ್ಲಿನಿಕ್‌ನ ಸಂಯೋಜಕ ಡಾ. ಮನೋಜ್ ಕುಮಾರ್ ಶರ್ಮಾ ಅವರ ಪ್ರಕಾರ, ವಯಸ್ಕರಿಗೆ ದಿನಕ್ಕೆ ೬-೭ ಗಂಟೆಗಳ ನಿದ್ರೆ ಬೇಕಾಗುತ್ತದೆ. ಉತ್ತಮ ನಿದ್ರೆಗಾಗಿ ಡಿಜಿಟಲ್ ಹೈಜಿನ್ ಅಭ್ಯಾಸ ಮಾಡಲು ಅವರು ಸಲಹೆ ನೀಡಿದ್ದಾರೆ.