ಮೊಬೈಲ್ ಟವರ್, ಸ್ಮಶಾನ ಭೂಮಿ ಮಂಜೂರು ಮಾಡಲು ಆಗ್ರಹ

ಸಂಜೆವಾಣಿ ವಾರ್ತೆ
ಹನೂರು ಮಾ 30 :- ತಾಲೂಕು, ಶಾಗ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಾಣಿಗ ಮಂಗಲ ಗ್ರಾಮದಲ್ಲಿ ಬಿ.ಎಸ್.ಎನ್.ಎಲ್ ಟವರ್ ಮತ್ತು ಸ್ಮಶಾನ ಭೂಮಿ ಮಂಜೂರು ಮಾಡಲು ಆಗ್ರಹಿಸಿ ಗ್ರಾಮದ ಜನರು ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ.
ಸ್ವತಂತ್ರ ಬಂದು 75 ವರ್ಷ ಕಳೆದು ತಾಂತ್ರಿಕತೆಯಲ್ಲಿ ಇಡಿ ಪ್ರಪಂಚದಲ್ಲಿಯೆ ಮುಂಚೂಣಿಯಲ್ಲಿರುವ ಈ ದೇಶದ ಗ್ರಾಮವೊಂದಕ್ಕೆ ಇದುವರೆಗೆ ಮೊಬೈಲ್ ಸಂಪರ್ಕ ಇರದೆ ಇರುವುದು ಕಂಡುಬಂದಿದ್ದು ದುರಾದೃಷ್ಟಕರವಾಗಿದೆ.
ಹನೂರು ತಾಲೂಕಿನ ಶಾಗ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಣಿಗ ಮಂಗಲ ಗ್ರಾಮದಲ್ಲಿ ಇದುವರೆಗೂ ಮೋಬೈಲ್ ನೆಟವರ್ಕ ಸಿಗದ ಗ್ರಾಮವಾಗಿದೆ. ಬಿಎಸ್‍ಎನ್‍ಎಲ್‍ಗೆ ಈಗಾಗಲೇ ಟವರ್ ನಿರ್ಮಾಣ ಮಾಡಲು ಜಾಗವನ್ನು ಗುರುತಿಸಿ ಬಿಎಸ್‍ಎನ್‍ಎಲ್ ಗೆ ಹಸ್ತಾಂತರಿಸಲಾಗಿದೆ.
ಜಾಗದ ಆರ್.ಟಿ.ಸಿ ಯನ್ನು ನೀಡಿ ಒಂದು ವರ್ಷ ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಬಿ.ಎಸ್.ಎನ್.ಎಲ್ ವಿರುದ್ಧ ಜನ ಪ್ರತಿಭಟಿಸಲು ನಿರ್ಧರಿಸಿದ್ದು ಗ್ರಾಮದ ಜನರು ಬಿ.ಎಸ್.ಎನ್.ಎಲ್ ಕೊಳ್ಳೆಗಾಲ ಮತ್ತು ಮೈಸೂರು ಕಛೇರಿಯನ್ನು ಸಂಪರ್ಕಿಸಿದಾಗ ನಮಗೆ ಡೆಲ್ಲಿ ಇಂದ ಅನುಮತಿ ಬರಬೇಕಾಗಿ ತಿಳಿಸಿ ಉಡಾಫೆ ಉತ್ತರ ನೀಡುತ್ತಿದ್ದಾರೆ.
ಗ್ರಾಮದಲ್ಲಿ ಸ್ಮಶಾನ ಭೂಮಿ ಇಲ್ಲದ ಕಾರಣ ಕಂದಾಯ ಇಲಾಖೆಯಿಂದ ಮಂಜೂರಾಗಿದ್ದರೂ ಸಹ ಕಾಗದದಲ್ಲಿ ಮಾತ್ರ ಇದ್ದು ಸ್ಮಶಾನ ಜಾಗವನ್ನು ಗ್ರಾಮಸ್ಥರಿಗೆ ಇದುವರೆಗೂ ಗುರುತಿಸಿ ಕೊಟ್ಟಿರುವುದಿಲ್ಲ ಈ ಕುರಿತು ಹಲವಾರು ಬಾರಿ ಗ್ರಾಮದ ಕಂದಾಯ ಇಲಾಖೆಯ ಸಿಬ್ಬಂದಿಯನ್ನು ಸಂಪರ್ಕಿಸಿದಾಗ ಜಾಗವನ್ನು ಗುರುತಿಸಿಕೊಡುವ ಗೋಜಲಿಗೆ ಕಂದಾಯ ಇಲಾಖೆಯ ಸಿಬ್ಬಂದಿಗಳು ನಿರ್ಲಕ್ಷ ಮಾಡುತ್ತಿದ್ದಾರೆ.
ಗಾಣಿಗ ಮಂಗಲ ಗ್ರಾಮದಲ್ಲಿನ ಪ್ರಮುಖವಾಗಿ ಎರಡು ಸಮಸ್ಯೆಯನ್ನು ಸರಿಪಡಿಸಲು ಸೂಕ್ತ ಕ್ರಮಕೈಗೊಳ್ಳದಿದ್ದರೆ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮದ ಮುಖಂಡರಾದ ರಾಜಪ್ಪ, ಕರಿಯಪ್ಪ, ಹಿರಯ್ಯ ಮತ್ತು ಮಹದೇವಸ್ವಾಮಿರವರು ತಿಳಿಸಿದ್ದಾರೆ.