ಮೊಬೈಲ್ ಜಗತ್ತಿಗೂ ಮೀರಿದ ಶಕ್ತಿ ರಂಗಭೂಮಿಗಿದೆ


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಡಿ.23: ಮೊಬೈಲ್ ಜಗತ್ತನ್ನೂ ಮೀರಿದ ಶಕ್ತಿ ರಂಗಭೂಮಿಗಿದೆ ಎಂದು ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಕನ್ನಡ ಉಪನ್ಯಾಸಕ ಮಲ್ಲಯ್ಯ ಸಂಡೂರು ಅಭಿಪ್ರಾಯಪಟ್ಟರು.
ಅವರು ಪಟ್ಟಣದ ದುರ್ಗದಾಸ ರಂಗಮಂದಿರದಲ್ಲಿ ಜರುಗಿದ ಲಲಿತಕಲಾರಂಗದ 38 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ರಂಗಭೂಮಿ ಸಾಮಾಜಿಕ ಬದಲಾವಣೆಗೆ ಸದಾ ಶ್ರಮಿಸುತ್ತಿದೆ.  ನಾಟಕ ಕಲೆ ಇಂದಿಗೂ ಜೀವಂತಿಕೆಯನ್ನು ಕಂಡು ಕೊಂಡಿದೆ ಎಂದರೆ ಅದು ಪ್ರೇಕ್ಷಕನ ಆಸಕ್ತಿಯಿಂದ ಮಾತ್ರ. ನಾಟಕ ರಂಗದ ಪ್ರೇಕ್ಷಕ ವರ್ಗ ವಿಭಿನ್ನವಾಗಿರುತ್ತದೆ. ಇದರಿಂದ ನಾಟಕಗಳು ನಿರಂತರ ಪ್ರಯೋಗಶೀಲವಾಗಿರುತ್ತವೆ ಎಂದರು.
ಮ ಬ ಸೋಮಣ್ಣರು ತಮ್ಮ ಈ ಇಳಿ ವಯಸ್ಸಿನಲ್ಲಿಯೂ ಕ್ರಿಯಾಶೀಲರಾಗಿ ತೊಡಗಿಕೊಂಡಿದ್ದಾರೆ. ರಂಗಭೂಮಿಗೆ ಅವರ ಕೊಡುಗೆ ಅಪಾರವಾಗಿದೆ. ನಾಟಕ ರಚನೆ, ರಂಗಗೀತೆಗಳ ರಚನೆಕಾರರಾಗಿ ನಿರ್ದೇಶಕರಾಗಿಯೂ ರಂಗಭೂಮಿಗೆ ದುಡಿದಿದ್ದಾರೆ. ಯುವ ತಲೆಮಾರಿನವರು ರಂಗಕಲೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಈ ಕಲಾ ಪರಂಪರೆಯನ್ನು ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ಅವರ ಮೇಲಿದೆ ಎಂದರು. 
ಹಿರಿಯ ರಂಗಕರ್ಮಿ ಮ.ಬ ಸೋಮಣ್ಣ ಮಾತನಾಡಿ, ರಂಗಭೂಮಿ ಮಕ್ಕಳಲ್ಲಿ ಸೃಜನಶೀಲ ಮನೋಭಾವನೆಯನ್ನು ಮೂಡಿಸುತ್ತದೆ. ಅಲ್ಲದೇ ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದ್ದು, ಶಾಶ್ವತವಾಗಿ ಉಳಿಯುತ್ತದೆ. ಸರಕಾರಗಳು ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಂಗಶಿಕ್ಷಕರನ್ನು ನೇಮಿಸಿಕೊಳ್ಳಲಿ ಎಂದು ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಬಿ ಅಂಬಣ್ಣ, ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿವೃತ್ತ ಶಿಕ್ಷಕ ಕೆ. ಕರಿಬಸಪ್ಪ, ಕೀರ್ತಿರಾಜ್‌ ಜೈನ್‌ ಉಪಸ್ಥಿತರಿದ್ದರು. ಕುಮಾರಿ ಅಕ್ಷೋಹಿಣಿ ಲಲಿತ ಕಲಾ ರಂಗ ನಡೆದು ಬಂದ ದಾರಿಯನ್ನು ಪರಿಚಯಿಸಿದರು.  ಕಾರ್ಯಕ್ರಮವನ್ನು ಕಲಾವಿದೆ ಶೋಭಾ ಪ್ರಾರ್ಥಿಸಿ, ನ್ಯಾಯವಾದಿ ಜಿಎಂ ಕೊಟ್ರೇಶ ಸ್ವಾಗತಿಸಿದರು.  ನಿವೃತ್ತ ಮುಖ್ಯಗುರು ಬಿಎಂಎಸ್.‌ ಮೃತ್ಯುಂಜಯಪ್ಪ ಕಾರ್ಯಕ್ರಮ ನಿರ್ವಹಿಸಿದರು.
ಕಲಾನಿಧಿ ಪ್ರಶಸ್ತಿ ಪ್ರದಾನ: 2022-23 ನೇ ಸಾಲಿನ ಪದ್ಮರಾಜ್‌ ಜೈನ್‌ ಹಾಗೂ ನೇಮಿರಾಜ್‌ ಜೈನ್‌ ಇವರ ಸ್ಮರಣಾರ್ಥ  ಕಲಾನಿಧಿ ಪ್ರಶಸ್ತಿ ಹಾಗೂ ನಗದು ಪುರಸ್ಕಾರವನ್ನು ಗೊಲ್ಲರಹಳ್ಳಿಯ ಹಿರಿಯ ಬಯಲಾಟ ಕಲಾವಿದ ಎ ನಾರಾಯಣಪ್ಪರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.