ಮೊಬೈಲ್ ಕಳ್ಳತನ ಮಾಡಿ ಫೋನ್ ಪೇ, ಗೂಗಲ್ ಪೇ ಮೂಲಕ ಹಣ ದೋಚುತ್ತಿದ್ದ ಇಬ್ಬರು ಖದೀಮರ ಬಂಧನ

ಕಲಬುರಗಿ,ಜು.25-ಅಂತರ ರಾಜ್ಯ ಮೊಬೈಲ್ ಕಳ್ಳತನ ಮಾಡಿ ಫೋನ್ ಪೇ, ಗೂಗಲ್ ಪೇ ಮೂಲಕ ಹಣ ದೋಚುತ್ತಿದ್ದ ಇಬ್ಬರು ಖದೀಮರನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣ ರಾಜ್ಯದ ಕಿರಣ್ ರಾಜು ಸಾತಪಾಟಿ ಮತ್ತು ಶಿವಾ ಅಲಿಯಾಸ್ ಶಿವಾಜಿ ವೆಂಕಟೇಶ ಉಪ್ಲಾ ಎಂಬುವವರನ್ನು ಬಂಧಿಸಿ ಕಳ್ಳತನಕ್ಕೆ ಬಳಸಿದ್ದ ಒಂದು ಕಾರು, 22 ಮೊಬೈಲ್ ಸೇರಿ 3.50 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಇವರು ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ರಾಯಚೂರು ಗದಗ ಸೇರಿದಂತೆ ಮುಂತಾದ ಜಿಲ್ಲೆಗಳಲ್ಲಿ ಹಾಗೂ ನೆರೆಯ ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಮೊಬೈಲ್‍ಗಳನ್ನು ಕದ್ದು ಫೋನ್ ಪೇ ಮತ್ತು ಗೂಗಲ್ ಪೇ ಮೂಲಕ ಜನರಿಂದ ಹಣ ದೋಚುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಖದೀಮರ ಪತ್ತೆಗೆ ಎಸ್.ಪಿ. ಇಶಾ ಪಂತ್, ಹೆಚ್ಚುವರಿ ಎಸ್.ಪಿ. ಪ್ರಸನ್ನ ದೇಸಾಯಿ, ಗ್ರಾಮೀಣ ಉಪ-ವಿಭಾಗದ ಡಿ.ಎಸ್.ಪಿ.ಶೀಲವಂತ ಹೊಸಮನಿ ಅವರ ಮಾರ್ಗದರ್ಶನದಲ್ಲಿ ಸಿ.ಇ.ಎನ್.ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸೋಮಲಿಂಗ ಕಿರೇದಳ್ಳಿ, ಪಿ.ಎಸ್.ಐ.ಚೇತನ್ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಸಿದ್ದಪ್ಪ ಪೂಜಾರಿ, ಕುಶಣ್ಣ, ಬಸವರಾಜ ಮಳ್ಳಿ, ಮುತ್ತುರಾಜ, ಪ್ರಮೋದ, ನಾಗೇಂದ್ರ, ಪ್ರಕಾಶ ಸಾಲಿ ಹಾಗೂ ಭೀಮಾಶಂಕರ ಅವರೊನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಈ ವಿಶೇಷ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಈ ಕೃತ್ಯದಲ್ಲಿ ಭಾಗಿಯಾದ ಇನ್ನುಳಿದ ಆರೋಪಿಗಳ ಪತ್ತೆಗೆ ವಿಶೇಷ ತಂಡ ಜಾಲ ಬೀಸಿದೆ.
ಅಂತರ ರಾಜ್ಯ ಮೊಬೈಲ್ ಕಳ್ಳತನ ಮಾಡಿ ಫೋನ್ ಪೇ ಮತ್ತು ಗೂಗಲ್ ಪೇ ಮೂಲಕ ಹಣ ಜನರಿಂದ ಹಣ ದೋಚುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಸಿ.ಇ.ಎನ್.ಪೊಲೀಸ್ ಠಾಣೆಯ ವಿಶೇಷ ತಂಡದ ಕಾರ್ಯಕ್ಕೆ ಮೇಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.