ಮೊಬೈಲ್ ಎಟಿಎಂ,ಮನೆ ಬಾಗಿಲಲ್ಲೇ ಹಾಲಿನ ಬಟವಾಡೆ

ಕೋಲಾರ,ಏ.೨೫: ಕೋವಿಡ್ ೨ನೇ ಅಲೆಯ ಅಟ್ಟಹಾಸದಿಂದ ಸೋಂಕು ಏರುತ್ತಿರುವುದರ ಜತೆಗೆ ಅನೇಕ ಜೀವಗಳು ಬಲಿಯಾಗುತ್ತಿರುವ ಸಂದರ್ಭದಲ್ಲಿ ರೈತರು ಹಾಗೂ ಹಾಲು ಉತ್ಪಾದಕರ ಆರೋಗ್ಯ ಸುರಕ್ಷತೆಗೆ ಬದ್ದತೆ ಹೊಂದಿರುವ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಮನೆಬಾಗಿಲಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.ನಗರದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತೆರಳಿದ ಎಟಿಎಂ, ಮೈಕ್ರೋ ಎಟಿಎಂ ಸೌಲಭ್ಯ ಹೊಂದಿರವ ಸುಸಜ್ಜಿತ ಮೊಬೈಲ್ ಬ್ಯಾಂಕಿಂಗ್ ವಾಹನ ತೆರಳಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.ಜಿಲ್ಲೆಯ ಜೀವಾಳವಾಗಿರುವ ಹೈನುಗಾರಿಕೆ ನಮ್ಮ ಗ್ರಾಮೀಣ ಜನರ ಬದುಕಿಗೆ ರಕ್ಷಣೆ ನೀಡಿದೆ, ೪೫೪ ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ೧೪೨೬೦ ಮಂದಿ ಹಾಲು ಉತ್ಪಾದಕ ರೈತರ ಉಳಿತಾಯ ಖಾತೆಗಳು ಡಿಸಿಸಿ ಬ್ಯಾಂಕಿನಲ್ಲಿವೆ ಎಂದರು.
ಈ ರೈತರು ಎಂಪಿಸಿಎಸ್‌ಗಳಿಗೆ ಹಾಕುವ ಹಾಲಿನ ಬಟವಾಡೆ ಹಣವನ್ನು ಹಾಲು ಒಕ್ಕೂಟ ಅವರ ಖಾತೆಗೆ ತುಂಬುತ್ತದೆ. ಈ ಹಣವನ್ನು ಪಡೆಯಲು ರೈತರು ಬ್ಯಾಂಕಿಗೆ ಬರಲು ಕೋವಿಡ್ ಮಾರಿ ಅಡ್ಡಿಯಾಗಿದೆ, ಸೋಂಕು ಗ್ರಾಮೀಣ ಪ್ರದೇಶಕ್ಕೂ ಹರಡಿ ರೈತರನ್ನು ಆತಂಕಕ್ಕೆ ತಳ್ಳಿದೆ ಎಂದರು.
ಇಂತಹ ಸಂದರ್ಭದಲ್ಲಿ ರೈತರ ಆರೋಗ್ಯ ಸುರಕ್ಷೆ ದೃಷ್ಟಿಯಿಂದ ಡಿಸಿಸಿ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ವಾಹನ,ಮೈಕ್ರೋ ಎಟಿಎಂ ಸೌಲಭ್ಯ ಕಲ್ಪಿಸಿದೆ ಮತ್ತು ಪ್ರತಿ ಹಾಲು ಉತ್ಪಾದಕರಿಗೂ ಎಟಿಎಂ ಕಾರ್ಡ್ ನೀಡಿದೆ, ಯಾರಿಗಾದರೂ ಅಗತ್ಯವಿದ್ದರೆ ಅರ್ಜಿ ಸಲ್ಲಿಸಿ ಕೂಡಲೇ ಎಟಿಎಂ ಕಾರ್ಡ್ ಪಡೆದುಕೊಳ್ಳಬಹುದಾಗಿದೆ ಎಂದರು.
ಹಾಲು ಉತ್ಪಾದಕ ಸಹಕಾರ ಸಂಘಗಳ ಕಾರ್ಯದರ್ಶಿಗಳು ದೂರವಾಣಿ ಕರೆ ಮಾಡಿದರೆ ಮೊಬೈಲ್ ಬ್ಯಾಂಕಿಂಗ್ ವಾಹನ ದಿನದ ೨೪ ಗಂಟೆಗಳು ಸೇವೆಗೆ ಸಿದ್ದವಿದ್ದು, ಸಹಕಾರ ಸಂಘದ ಮುಂದೆ ಬಂದು ನಿಲ್ಲುತ್ತದೆ. ಅಲ್ಲಿಗೆ ಬಂದು ರೈತರು ಎಟಿಎಂ ಮೂಲಕ ತಮ್ಮ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳಬಹುದಾಗಿದ್ದು, ಇದಕ್ಕೆ ಬ್ಯಾಂಕ್ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದರು.
ಜತೆಗೆ ಮೊಬೈಲ್ ಎಟಿಎಂ ವಾಹನದ ಮೂಲಕ ರೈತರನ್ನು ಕೋವಿಡ್‌ನಿಂದ ರಕ್ಷಿಸುವ ಪ್ರಾಮಾಣಿಕ ಪ್ರಯತ್ನ ಹಾಗೂ ಅನ್ನದಾತರಿಗೆ ಹಣಕಾಸು ನಿರ್ವಹಣೆ ಹಾಗೂ ಡಿಜಿಟಲ್ ಸಾಕ್ಷರತೆಯ ಕುರಿತು ಅರಿವು ನೀಡುವ ಕೆಲಸವನ್ನು ಡಿಸಿಸಿ ಬ್ಯಾಂಕ್ ಮಾಡುತ್ತಿದೆ ಎಂದು ತಿಳಿಸಿದರು.
ರೇಷ್ಮೆ ಬೆಳೆಗಾರರು ಹಾಗೂ ರೇತರ ಸಹಕಾರ ಸಂಘಗಳಿಗೂ ಈಗಾಗಲೇ ಮೈಕ್ರೋ ಎಟಿಎಂ ನೀಡಲಾಗಿದೆ, ಅಲ್ಲಿಯೂ ರೈತರು ಮೈಕ್ರೋ ಎಟಿಎಂನದಲ್ಲಿ ಹಣ ಡ್ರಾ ಅಥವಾ ಸಂದಾಯ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಆಯಾ ಸೊಸೈಟಿ ವ್ಯಾಪ್ತಿಯ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಹಾಲು ಉತ್ಪಾಕರಿಗೆ ಬಟವಾಡೆ ಹಣ ಡ್ರಾ ಮಾಡಲು ಅಗತ್ಯವಿದ್ದರೆ ಆಯಾ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಡಿಸಿಸಿ ಬ್ಯಾಂಕಿನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿದರೆ ಮೊಬೈಲ್ ಬ್ಯಾಂಕಿಂಗ್ ವಾಹನ ಅಲ್ಲಿಗೆ ಬಂದು ನಿಲ್ಲುತ್ತದೆ ಎಂದರು.
ಬ್ಯಾಂಕಿನ ಹುಸೇನ್ ದೊಡ್ಡಮನಿ-೯೪೪೯೨೫೨೬೭೮, ಸತೀಶ್-೮೬೬೦೫೪೭೨೧೭, ಹ್ಯಾರೀಸ್-೯೪೪೮೨೮೯೧೩೫, ಅಬ್ದುಲ್ ಜಬ್ಬಾರ್-೯೬೮೬೦೮೮೦೯೩ ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ ಮೊಬೈಲ್ ಬ್ಯಾಂಕಿಂಗ್ ಸೇವೆ ಅಗತ್ಯವೆಂದು ತಿಳಿಸಿದರೆ ಸಾಕು ವಾಹನ ಡೇರಿ ಮುಂದೆ ನಿಲ್ಲುತ್ತದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕಿಗೆ ಹೊಸ ಮನ್ವಂತರಕ್ಕೆ ಸ್ಪಂದಿಸಲು ಆಧುನಿಕತೆಗೆ ತಕ್ಕಂತೆ ಫೋನ್ ಫೇ, ಗೂಗಲ್ ಫೇ ಮತ್ತಿತರ ಆನ್‌ಲೈನ್ ಬ್ಯಾಂಕಿಂಗ್ ಸೇವೆಗೂ ಅನುಮತಿ ನೀಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಬ್ಯಾಲಹಳ್ಳಿ ಗೋವಿಂದಗೌಡರು ಧನ್ಯವಾದ ಸಲ್ಲಿಸಿದರು.
ರೈತರು,ತಾಯಂದಿರ ಆರ್ಥಿಕಾಭಿವೃದ್ದಿಗೆ ಸದಾ ಸಿದ್ದವಾಗಿರುವ ಡಿಸಿಸಿ ಬ್ಯಾಂಕ್‌ಗೆ ಇದೀಗ ಆಧುನಿಕ ಸ್ವರ್ಶ ನೀಡಲಾಗಿದ್ದು, ವಾಣಿಜ್ಯ ಬ್ಯಾಂಕುಗಳಲ್ಲಿ ಸಿಗುವ ಎಲ್ಲಾ ಆನ್‌ಲೈನ್ ಸೇವೆಗಳು ಇಲ್ಲಿಯೂ ಲಭ್ಯವಿದೆ ಎಂದು ತಿಳಿಸಿದರು.
ರೈತರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸುತ್ತಿರುವುದು ಬ್ಯಾಂಕಿಂಗ್ ಇತಿಹಾಸದಲ್ಲೇ ಮೈಲಿಗಲ್ಲು ಎಂದ ಅವರು, ಇದರ ಸದುಪಯೋಗ ಪಡೆದುಕೊಳ್ಳಲು ಜಿಲ್ಲೆಯ ರೈತರು,ಹಾಲು ಉತ್ಪಾದಕರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಅಧಿಕಾರಿಗಳಾದ ಹುಸೇನ್‌ದೊಡ್ಡಮನಿ, ಅಮೀನಾ, ಹ್ಯಾರೀಸ್, ಅಬ್ದುಲ್ ಜಬ್ಬಾರ್, ಸತೀಶ್, ಕುರುಬೂರು ನಾಗರಾಜ್ ಮತ್ತಿತರರಿದ್ದರು.