ಮೊಬೈಲ್ ಆಪ್ ಮೂಲಕ ಸಾಲ ನೀಡಿ ಕಿರುಕುಳ ಇಬ್ಬರು ಖದೀಮರ ಸೆರೆ ಚೀನಾ ಪ್ರಜೆಗೆ ಶೋಧ

ಬೆಂಗಳೂರು,ನ.೨೬- ಆನ್‌ಲೈನ್ ಮೊಬೈಲ್ ಆಪ್ ಮೂಲಕ ಸಾಲ ನೀಡಿ ದುಬಾರಿ ಬಡ್ಡಿ ವಸೂಲಿ ಮಾಡುತ್ತ ಗ್ರಾಹಕರಿಗೆ ಮಾನಸಿಕ ಹಿಂಸೆ ನೀಡುವುದು ಹಾಗೂ ನಕಲಿ ಕಂಪನಿಗಳನ್ನು ಸೃಷ್ಟಿಸಿ ಬ್ಯಾಂಕ್ ಖಾತೆ ತೆರೆದು ಹಣವನ್ನು ಹೂಡಿಕೆ ಮಾಡಿಕೊಂಡು ಲಾಭಾಂಶದ ಆಮಿಷವೊಡ್ಡಿ ವಂಚಿಸುತ್ತಿದ್ದ ಇಬ್ಬರು ಖತರ್ನಾಕ್ ಖದೀಮರನ್ನು ಸಿಸಿಬಿ ಪೊಲೀಸರು
ಬಂಧಿಸಿದ್ದಾರೆ.
ಲೈಕೋರೈಸ್ ಟೆಕ್ನಾಲಜಿಯ ಮಾನವ ಸಂಪನ್ಮೂಲ ಅಧಿಕಾರಿ ಕಾಮರಾಜ್ ಮೋರೆ (೨೫) ಹಾಗೂ ಟೀಂ ಲೀಡರ್ ದರ್ಶನ್ ಚೌಹಾಣ್ (೨೨) ಬಂಧಿತ ಅರೋಪಿಗಳಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿ ಪರಾರಿಯಾಗಿರುವ ಚೀನಾ ದೇಶದ ಪ್ರಜೆಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ತಿಳಿಸಿದ್ದಾರೆ.
ಕೆಆರ್ ಪುರಂನ ಮುನ್ನೆಕೊಳಲಾದಲ್ಲಿ ಲೈಕೊರೈಸ್ ಟೆಕ್ನಾಲಜಿ ಎಂಬ ಕಂಪನಿ ಹೆಸರಲ್ಲಿ ಕಚೇರಿ ತೆರೆದು ಸಾರ್ವಜನಿಕರಿಗೆ ಮೊಬೈಲ್ ಆಪ್‌ಗಳಾದ ಕ್ಯಾಶ್ ಮಾಸ್ಟರ್, ಕ್ರೇಜಿರೂಪಿಸ್ ಎಂಬ ಆಪ್ ಮೂಲಕ ಒಪ್ಪಂದ ಮಾಡಿಕೊಂಡು ಆನ್‌ಲೈನ್ ಆಪ್‌ಗಳ ಮೂಲಕ ಸಾರ್ವಜನಿಕರಿಗೆ ವಾರದ ಬಡ್ಡಿಗೆ ಸಾಲ ನೀಡುತ್ತಿದ್ದರು.
ಸಾಲಕ್ಕೆ ಪ್ರೊಸೆಸಿಂಗ್ ಚಾರ್ಜ್ ಹಾಕಿ ಬಳಿಕ ದುಬಾರಿ ವಾರದ ಬಡ್ಡಿಯನ್ನು ಸೇರಿಸಿ ವಾರ ವಾರ ಮರುಪಾವತಿ ಮಾಡುವಂತೆ ಮೊಬೈಲ್ ಹಾಗೂ ಇಂಟರ್‌ನೆಟ್ ಮೂಲಕ ಕರೆ ಮಾಡುತ್ತಿದ್ದರು.
ಸಾಲ ಮರು ಪಾವತಿ ಮಾಡಲು ವಿಫಲರಾದ ಗ್ರಾಹಕರ ಖಾಸಗಿ ಮಾಹಿತಿಯನ್ನು ಆಕೆಯ ಹಾಗೂ ಆತನ ಸ್ನೇಹಿತರಿಗೆ ಕಳುಹಿಸಿ ಅವಮಾನ ಮಾಡಿ ಮಾನಸಿಕ ಹಿಂಸೆ ನೀಡಿ ಬೆದರಿಕೆ ಹಾಕುತ್ತಿದ್ದರು.
ಮೊದಲು ಪರಾರಿಯಾಗಿರುವ ಚೀನಾ ದೇಶದ ಪ್ರಜೆಯೊಬ್ಬ ಈ ಕಂಪನಿಯನ್ನು ತೆರೆದಿದ್ದು, ಬಳಿಕ ಒಬ್ಬರ ಹೆಸರಿನಲ್ಲಿ ಐದಾರು ಕಂಪನಿಗಳನ್ನು ತೆರೆದಿದ್ದರು. ಯಾವುದಾದರೂ ಆಪ್‌ಗಳ ಬಗ್ಗೆ ಸಾರ್ವಜನಿಕರಿಗೆ ವರದಿ ಮಾಡಿದರೆ ಮತ್ತೊಂದು ಆಪ್ ಮೂಲಕ ಕಾರ್ಯನಿರ್ವಹಿಸುತ್ತಿದ್ದರು. ಅಷ್ಟೇ ಅಲ್ಲದೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಹುದು ಎಂಬ ಆಮಿಷವೊಡ್ಡಿ ನಂಬಿಕೆ ಹುಟ್ಟಿಸಿ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು.
ಒಬ್ಬರ ಹೆಸರಿನಲ್ಲಿ ೫ ರಿಂದ ೬ ರಂತೆ ಕಂಪನಿಗಳನ್ನು ನೋಂದಾಯಿಸಿ ಒಟ್ಟು ೫೨ ಕಂಪನಿಗಳನ್ನು ನೋಂದಾವಣೆ ಮಾಡಿ ಅವುಗಳ ಹೆಸರಿನಲ್ಲಿ ಎಸ್, ಐಸಿಐಸಿ, ಕೋಟಾಕ್ ಮಹೀಂದ್ರ, ಐಡಿಎಫ್‌ಸಿ ಇನ್ನಿತರ ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ದುಬಾರಿ ಬಡ್ಡಿಯ ಸಾಲದ ಹಣವನ್ನು ಖಾತೆಗೆ ಜಮಾಯಿಸಿ ಆನ್‌ಲೈನ್ ಮುಖಾಂತರ ಆ ಖಾತೆಗಳಿಂದ ಕೊಟ್ಯಂತರ ಹಣವನ್ನು ನಮ್ಮ ದೇಶಕ್ಕೆ ರವಾನಿಸಿಕೊಂಡಿದ್ದರು ಎಂದು ಸಂದೀಪ್ ಪಾಟೀಲ್ ತಿಳಿಸಿದರು.
ಸುಮಾರು ೫೨ ಕಂಪನಿಗಳನ್ನು ಚೀನಾದ ಖದೀಮರು ನಗರದ ಅಮಾಯಕರಿಂದ ದಾಖಲಾತಿಗಳನ್ನು ಪಡೆದು ಅವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ನೋಂದಾಯಿಸಿ ಬಳಿಕ ಕಂಪನಿಗಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಅಕ್ರಮ ಹಣ ಸಂಪಾದಿಸಲು ಆನ್‌ಲೈನ್ ಮೊಬೈಲ್ ಆಪ್‌ಗಳ ಮೂಲಕ ಸಾಲ ನೀಡಿ ಸಾರ್ವಜನಿಕರಿಗೆ ಹಣವನ್ನು ಮರುಪಾವತಿ ಮಾಡುವ ಸಲುವಾಗಿ ಪದೇ ಪದೇ ಕರೆ ಮಾಡಿ ಅವಮಾನ ಮಾಡಿ ವಾರದ ಬಡ್ಡಿ ಸಿಬಿಲ್ ಸ್ಕೋರ್ ಕಡಿತವಾಗುತ್ತದೆ ಹಾಗೂ ಇನ್ನೂ ಬಡ್ಡಿ ಹೆಚ್ಚಾಗುತ್ತದೆ ಎಂದು ಮಾನಸಿಕ ಹಿಂಸೆ ನೀಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಅವರು ತಿಳಿಸಿದರು.
ಬಂಧಿತ ಆರೋಪಿಗಳಿಂದ ೮೩ ಮೊಬೈಲ್‌ಗಳನ್ನು ವಶಪಡಿಸಿಕೊಂಡು ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.