ನಕಲಿ ಕೀಗಳನ್ನು ಬಳಸಿ ಮನೆ ಬಾಗಿಲು ತೆರೆದು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯಿಂದ ತಿಲಕ್ ನಗರ ಪೊಲೀಸರು ವಶಪಡಿಸಿಕೊಂಡಿರುವ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ನಗರ ಪೊಲೀಸ್ ಆಯುಕ್ತ ದಯಾನಂದ್‌ರವರು ಪರಿಶೀಲನೆ ನಡೆಸಿದರು. ಪೊಲೀಸ್ ಅಧಿಕಾರಿಗಳು ಇದ್ದಾರೆ.
ಬೆಂಗಳೂರು, ಅ.೩-ಸುಲಭದಲ್ಲಿ ಹಣ ಸಂಪಾದನೆ ಮಾಡಲು ಮೊಬೈಲ್ ಅಂಗಡಿಯ ಕನ್ನಗಳವು ಮಾಡಿದ್ದ ಮೂವರು ಪದವಿ ವಿದ್ಯಾರ್ಥಿಗಳನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಿರುವ ಸಂಜಯನಗರ ಪೊಲೀಸರು ೫೦ ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಹೆಚ್ ಎಸ್ ಆರ್ ಲೇಔಟ್ ನ ಪ್ರಭು(೨೦),ಮೌನೇಶ(೧೯) ಹಾಗೂ ಅಜಯ್ ಬಂಧಿತ ಆರೋಪಿಗಳಾಗಿದ್ದು ಇವರೆಲ್ಲರೂ ಪದವಿ ವಿದ್ಯಾರ್ಥಿ ಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಜಯನಗರದ ನ್ಯೂ ಬಿಇಎಲ್ ರಸ್ತೆಯ ಗ್ಯಾಜೆಟ್ ಕ್ಲಬ್ ಮೊಬೈಲ್ ಅಂಗಡಿಗೆ ಕಳೆದ ಸೆ.೨೮ ರಂದು ರಾತ್ರಿ ಬೀಗವನ್ನು ಮುರಿದು ಒಳನುಗ್ಗಿ ಅಂಗಡಿಯಲ್ಲಿಟ್ಟಿದ್ದ ವಿವಿಧ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿದ್ದು ಕೃತ್ಯ ನಡೆದ ಸ್ಥಳವನ್ನು ಪರಿಶೀಲಿಸಿದ ಹಿರಿಯ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಜಯನಗರ ಪೊಲೀಸ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದು, ತಂಡವು ತನಿಖೆ ಕೈಗೊಂಡು ಪ್ರಕರಣ ವರದಿಯಾದ ೩೬ ಗಂಟೆಯಲ್ಲಿ ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಿ ೫೦ ಲಕ್ಷ ಮೌಲ್ಯದ, ೨೯ ಐ_ಫೋನ್ ಮೊಬೈಲ್ ೩-ಓನ್ ಪ್ಲಸ್,೧೧-ಸ್ಯಾಮ್‌ಸಾಂಗ್,೩-ಗೂಗಲ್ ೪-ಓಪ್ಪೋ ೨-ಐಕ್ಯೂಓಓ ಕಂಪನಿಯ ಮೊಬೈಲ್‌ಗಳು, ವಿವಿಧ ಕಂಪನಿಯ ಲ್ಯಾಪ್‌ಟಾಪ್‌ಗಳು, ಸೋನಿ ಕಂಪನಿಯ ಹ್ಯಾಂಡಿ ಕ್ಯಾಮೆರಾಗಳು, ೨೦೨-ವಿವಿಧ ಸ್ಮಾರ್ಟ್ ವಾಚ್‌ಗಳು, ಹಾಗೂ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಲ್ಲದೆ, ಕೃತ್ಯಕ್ಕೆ ಬಳಸಿದ್ದಮಾರುತಿ ಸುಜುಕಿ ಇಕೋ ಗೂಡ್ಸ್ ವಾಹನ,ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಉತ್ತರ ವಿಭಾಗದ ಸೈದುಲು ಅಡಾವತ್, ಎಸಿಪಿ ಮನೋಜ್‌ಕುಮಾರ್ ಇನ್ಸ್‌ಪೆಕ್ಟರ್ ಭಾಗ್ಯವತಿ ಜೆ. ಬಂಟಿ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ದಯಾನಂದ ತಿಳಿಸಿದರು.