ಮೊಬೈಲ್‌ಗಾಗಿ ತಮ್ಮನ ಕೊಂದ ಅಣ್ಣನ ಬಂಧನ

ಬೆಂಗಳೂರು,ಮೇ೧೮-ನಗರದ ಹೊರವಲಯದ ಆನೇಕಲ್ ತಾಲೂಕಿನ ನೆರಿಗಾ ಗ್ರಾಮದಲ್ಲಿ ಬಹಿರ್ದೆಸೆಗೆ ತೆರಳಿದ್ದ ಬಾಲಕನನ್ನು ಸುತ್ತಿಗೆಯಿಂದ ಹೊಡೆದು ಕೊಲೆಗೈದಿದ್ದ ಆತನ ಸ್ವಂತ ಅಣ್ಣನನ್ನು ಸರ್ಜಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರದ ಕರ್ನೂಲ್ ಮೂಲದ ಪ್ರಾಣೇಶ್ (೧೫) ನನ್ನು ಕೊಲೆಗೈದು ಆತನ ಅಣ್ಣ ಶಿವಕುಮಾರ್(೧೮)ಬಂಧಿತ ಆರೋಪಿಯಾಗಿದ್ದಾನೆ.
ಮೊಬೈಲ್ ಚಟಕ್ಕೆ ಬಿದ್ದಿದ್ದ ಅಣ್ಣ ತನ್ನ ಮೊಬೈಲ್ ತೆಗೆದುಕೊಂಡು ಯಾವಾಗಲೂ ಆಟವಾಡುತ್ತಿದ್ದ ಕಾರಣಕ್ಕಾಗಿ ಆಕ್ರೋಶಗೊಂಡು ತಮ್ಮನನ್ನು ಕೊಲೆಮಾಡಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಆಂಧ್ರದ ಕರ್ನೂಲ್‌ನಲ್ಲಿ ಅಜ್ಜಿ ಮನೆಯಲ್ಲೇ ಇದ್ದುಕೊಂಡು ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ಪ್ರಾಣೇಶ್, ಬೇಸಿಗೆ ರಜೆ ಹಿನ್ನೆಲೆಯಲ್ಲಿ ತಂದೆ ತಾಯಿ ಇದ್ದ ನೆರಿಗಾ ಗ್ರಾಮಕ್ಕೆ ಬಂದಿದ್ದು, ಸಮಯ ಸಿಕ್ಕಾಗಲೆಲ್ಲ ಅಣ್ಣ ಶಿವಕುಮಾರ್‌ನ ಮೊಬೈಲ್ ತೆಗೆದುಕೊಂಡು ಆಟವಾಡುತ್ತಿದ್ದು, ಇದು ಶಿವಕುಮಾರ್‌ಗೆ ಕೋಪ ತರಿಸಿತ್ತು. ಹೀಗಾಗಿ ಮೇ ೧೫ರಂದು ತಮ್ಮ ಬಹಿರ್ದೆಸೆಗೆ ಹೋದಾಗ ಅವನನ್ನು ಹಿಂಬಾಲಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಪ್ರಾಣೇಶ್‌ನ ತಲೆ, ಹೊಟ್ಟೆ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಮನೆಗೆ ಬಂದು ತನಗೆ ಏನು ಗೊತ್ತಿಲ್ಲ, ತಾನು ಅಮಾಯಕನಂತೆ ಸುಮ್ಮನಾಗಿದ್ದಾನೆ.
ತಂದೆ ತಾಯಿ ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ಚಿಕ್ಕ ಮಗನಿಗಾಗಿ ಎಲ್ಲೆಡೆ ಹುಡುಕಾಡಿದ್ದಾರೆ. ಈ ವೇಳೆ ತಮ್ಮನ ಶವ ಬಿದ್ದಿದೆ ಎಂದು ಓಡೋಡಿ ಬಂದು ಶಿವಕುಮಾರ ಪೋಷಕರಿಗೆ ಕೊಲೆಯಾಗಿದೆ ಎಂದು ತಿಳಿಸಿದ್ದಾನೆ. ಚಿಕ್ಕ ಮಗನನ್ನು ಕಳೆದುಕೊಂಡ ಪೋಷಕರು ಕಣ್ಣೀರಿಡುತ್ತಲೇ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿ ಕೈಗೊಂಡ ತನಿಖೆಯಲ್ಲಿ ಪೊಲೀಸರಿಗೆ ಅಚ್ಚರಿ ಉಂಟಾಗಿದ್ದು, ತಮ್ಮನ ಶವವನ್ನ ನಾನೇ ಮೊದಲು ನೋಡಿದ್ದೆ ಎಂದು ಹೇಳುತ್ತಿದ್ದ ಶಿವಕುಮಾರನ ಮೇಲೆ ಪೊಲೀಸರಿಗೆ ಅನುಮಾನ ಬಂದಿದ್ದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
ಆರೋಪಿ ಶಿವಕುಮಾರ್ ತಮ್ಮನನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ತನಗೆ ಏನೂ ತಿಳಿಯದಂತೆ ಓಡಾಡಿಕೊಂಡಿದ್ದ. ಅಲ್ಲದೆ ಪೊಲೀಸರ ತನಿಖೆಯ ಹಾದಿ ತಪ್ಪಿಸಲು ಮುಂದಾಗಿದ್ದು,ಕೊಲೆಗೆ ಬಳಸಲಾದ ಸುತ್ತಿಗೆ ಜೇಬಿನಲ್ಲಿ ಇಟ್ಟುಕೊಳ್ಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕೊಲೆಯ ಹಿಂದಿನ ರಹಸ್ಯ ಬಯಲಾಗಿದೆ.
ಆಂಧ್ರ ಮೂಲದ ಸೂಳೆಕೆರಿ ಗ್ರಾಮದ ಚನ್ನಮ್ಮ ಮತ್ತು ಬಸವರಾಜ್ ಎಂಬ ಕೂಲಿಕಾರ್ಮಿಕ ದಂಪತಿಯ ಇಬ್ಬರು ಪುತ್ರರಲ್ಲಿ ಓರ್ವ ಕೊಲೆಯಾಗಿದ್ದು ಮತ್ತೋರ್ವ ಜೈಲು ಸೇರಿದ್ದಾನೆ. ಈ ದಂಪತಿ ೩ ತಿಂಗಳ ಹಿಂದೆ ಗಾರೇ ಕೆಲಸಕ್ಕೆಂದು ಆಂಧ್ರದಿಂದ ನೆರಿಗಾ ಗ್ರಾಮಕ್ಕೆ ಬಂದು ನೆಲೆಸಿದ್ದು, ದೊಡ್ಡ ಮಗನಿಗೆ ವಿಧ್ಯೆ ಹತ್ತಲಿಲ್ಲ ಎಂದು ತಮ್ಮೊಂದಿಗೆ ಕರೆದುಕೊಂಡು ಬಂದು ಗಾರೇ ಕೆಲಸಕ್ಕೆ ಹಾಕಿದ್ದರು. ಚಿಕ್ಕ ಮಗನಿಗೆ ಓದಿನಲ್ಲಿ ಆಸಕ್ತಿ ಇದ್ದ ಕಾರಣ ಅಜ್ಜಿ ಮನೆಯಲ್ಲೇ ಬಿಟ್ಟು ಓದಿಸುತ್ತಿದ್ದರು. ಶಾಲೆ ರಜೆ ಇದೆ ಎಂದು ತಂದೆ-ತಾಯಿ ಮನೆಗೆ ಬಂದ ಪ್ರಾಣೇಶ್ ಸ್ವಂತ ಅಣ್ಣನಿಂದಲೇ ಪ್ರಾಣ ಕಳೆದುಕೊಂಡಿದ್ದಾನೆ.