ಮೊಬೈಲ್‍ಗಳಂತೆ ಪುಸ್ತಕಗಳೂ ನಮ್ಮ ಜೀವನದ ಭಾಗವಾಗಲಿ : ರಶ್ಮಿ ಎಸ್.

ಬೀದರ: ನ.8:ಮೊಬೈಲ್‍ಗಳಂತೆ ಜ್ಞಾನದ ಹಸಿವನ್ನು ನೀಗಿಸುವ ಅತ್ಯಮೂಲ್ಯ ಪುಸ್ತಕಗಳೂ ಕೂಡಾ ನಮ್ಮ ಜೀವನದ ಭಾಗವಾಗಲಿ. ಹೆಚ್ಚು ಗ್ರಂಥಾಲಯಗಳು ಆರಂಭವಾಗಬೇಕು. ಓದುಗರ ಸಂಖ್ಯೆ ಹೆಚ್ಚಬೇಕು. ಇದರಿಂದಲೇ ಪುಸ್ತಕ ಸಂಸ್ಕøತಿ ಬೆಳೆಯುವುದರ ಜೊತೆಗೆ ಕಥೆ ಕವನ ಕಾದಂಬರಿಗಳ ರಚನಾಕಾರರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಪ್ರಜಾವಾಣಿ ಹುಬ್ಬಳ್ಳಿ ಬ್ಯೂರೋ ಸ್ಥಾನಿಕ ಸಂಪಾದಕಿ ಶ್ರೀಮತಿ ರಶ್ಮಿ ಎಸ್. ನುಡಿದರು.

ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ಬೀದರ, ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಸಹಯೋಗದಲ್ಲಿ ನಗರದ ನೆಹರೂ ಮೈದಾನದ ಹತ್ತಿರ ಇರುವ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯಲ್ಲಿ ಹಮ್ಮಿಕೊಂಡ ಮಹಾಲಕ್ಷ್ಮೀ ಪೂಜೆ ಹಾಗೂ ರಾಜ್ಯೋತ್ಸವ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಇಂದಿನ ಕವಿಗಳಿಗೆ ವಿಶ್ವಸಾಹಿತ್ಯದ ಪರಿಚಯವಿರಬೇಕು. ಬರಹಗಾರರು ಭಾರತೀಯ ಭಾಷೆಗಳ ಗ್ರಂಥಗಳ ಅಧ್ಯಯನ ಮಾಡಬೇಕು. ಪ್ರಾಚೀನ ಕಾಲದ ಕಾವ್ಯ ಕೃತಿಗಳನ್ನು ತಾಳೆ ನೋಡಬೇಕು. ದಿನನಿತ್ಯ ನಿಯತಕಾಲಿಕೆ ಹಾಗೂ ಪತ್ರಿಕೆಗಳನ್ನು ಓದಬೇಕು. ಸಮಾಜಮುಖಿ ಕವಿತೆಗಳ ರಚನೆಯ ಜೊತೆಗೆ ಕನ್ನಡ ನಾಡಿನ ಹೆಸರಾಂತ ಕವಿಗಳ ನವ್ಯ, ನವೋದಯ, ಬಂಡಾಯ, ದಲಿತ ಕವಿಗಳ ಕವಿತೆಗಳನ್ನು ಓದಬೇಕು. ಕವಿಗಳು ಶಬ್ದಭಂಡಾರ ಹೆಚ್ಚಿಸಿಕೊಳ್ಳುವುದರ ಜೊತೆಗೆ ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿ ಪುಸ್ತಕಗಳನ್ನು ಖರೀದಿಸಬೇಕು. ಮುಕ್ತ ಚರ್ಚೆಯೊಂದಿಗೆ ಅತ್ಯುತ್ತಮ ಸಮಾಜಮುಖಿ ಕವಿತೆಗಳನ್ನು ರಚಿಸಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾದ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಭಾರತಿ ವಸ್ತ್ರದ ಮಾತನಾಡಿ “ನಮ್ಮ ಸಂಘದ ವತಿಯಿಂದ ಮುಂಬರುವ ದಿನಗಳಲ್ಲಿ ಕವಿಗೋಷ್ಠಿ, ಚರ್ಚಾಗೋಷ್ಠಿ, ಕಥೆ, ಕವನ, ಕಾದಂಬರಿ ಗಜಲ್ ರಚನೆ ಕುರಿತು ತರಬೇತಿ ಕಮ್ಮಟಗಳನ್ನು ಹಮ್ಮಿಕೊಳ್ಳಲಾಗುವುದು. ತಮ್ಮೆಲ್ಲರ ಸಹಕಾರವಿರಲಿ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ ಪುಸ್ತಕ ಸಂಸ್ಕøತಿಯನ್ನು ಬೆಳೆಸಲು ಪ್ರತಿ ತಿಂಗಳು ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯಲ್ಲಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲದೇ ಸಭೆ ಸಮಾರಂಭಗಳಲ್ಲಿ ಹಾಗೂ ಮಂಗಳಕರ ಕಾರ್ಯಗಳಲ್ಲಿ ಇನ್ನಿತರ ಕಾಣಿಕೆ ಬದಲಾಗಿ ಪುಸ್ತಕಗಳನ್ನೇ ಕಾಣಿಕೆಯಾಗಿ ನೀಡುವ ಸಂಸ್ಕøತಿಗೆ ನಮ್ಮ ಸಂಘದ ವತಿಯಿಂದ ಈಗಾಗಲೇ ನಾಂದಿ ಹಾಡಲಾಗಿದೆ. ಸಭೆಗಳಲ್ಲಿ ಪುಸ್ತಕಗಳ ಕೊಡು-ಕೊಳ್ಳುವಿಕೆಯಿಂದ ಮನೆಯಲ್ಲಿ ಒಂದು ಮಿನಿ ಲೈಬ್ರರಿ ಸ್ಥಾಪನೆ ಮಾಡಿ ಅಧ್ಯಯನ ಕೈಗೊಳ್ಳಬೇಕು. ವ್ಯರ್ಥ ಕಾಲ ಕಳೆಯುವುದಕ್ಕಿಂತ ಗ್ರಂಥಾಧ್ಯಯನ ಮಾಡಿ ಜ್ಞಾನ ವೃದ್ಧಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕವಿಗೋಷ್ಠಿ: ಎಸ್.ಬಿ.ಕುಚಬಾಳ, ಶಾಂತಮ್ಮ ಬಲ್ಲೂರ, ಪುಣ್ಯವತಿ ವಿಸಾಜಿ, ಮಲ್ಲಮ್ಮ ಸಂತಾಜಿ, ಡಾ. ಸಾವಿತ್ರಿಬಾಯಿ, ಡಾ. ಮಹಾನಂದ ಮಡಕಿ, ಡಾ. ಅಶೋಕ ಕೋರೆ, ಮಾನಾ ಸಂಗೀತಾ, ನಾಗಯ್ಯ ಸ್ವಾಮಿ, ಡಾ. ಸುನಿತಾ ಕೂಡ್ಲಿಕರ್, ಡಾ. ಶ್ರೇಯಾ ಮಹಿಂದ್ರಕರ್, ಡಾ. ಸುಜಾತಾ ಹೊಸಮನಿ, ಸ್ವರೂಪಾ ನಾಗೂರೆ, ರಕ್ಷಿತಾ ಮಹಾಂತೇಶ ಕವನ ವಾಚನ ಮಾಡಿದರು.

ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ಸ್ವಾಗತಿಸಿದರು. ಡಾ. ರಾಜಕುಮಾರ ಹೆಬ್ಬಾಳೆ ಪ್ರಾಸ್ತಾವಿಕ ಮಾತನಾಡಿದರು. ಕಿರಣ ವಲ್ಲೆಪುರೆ ನಿರೂಪಿಸಿದರು. ಡಾ. ಕೂಡ್ಲಿಕರ್ ಸುನಿತಾ ವಂದಿಸಿದರು.