ಮೊದಲ ವೀಕೆಂಡ್ ಕಫ್ರ್ಯೂಗೆ ಕಂಪ್ಲಿ ಸ್ತಬ್ಧ

ಕಂಪ್ಲಿ ಏ 24 : ಮೊದಲ ವೀಕೆಂಡ್ ಕಫ್ರ್ಯೂಗೆ ಪಟ್ಟಣದಲ್ಲಿ ಶನಿವಾರದಂದು ಬಹುತೇಕ ಮುಖ್ಯರಸ್ತೆಗಳು, ಮಾರುಕಟ್ಟೆ ಪ್ರದೇಶ ಸೇರಿದಂತೆ ಎಲ್ಲೆಡೆ ಸ್ತಬ್ಧ ಚಿತ್ರಣ ಕಂಡು ಬಂತು.
ಎಲ್ಲೆಡೆ ಹೆಚ್ಚುತ್ತಿರುವ ಕೊರೋನಾ ಸೋಂಕು ಹಾವಳಿ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಆದೇಶಿಸಿರುವ ವೀಕೆಂಡ್ ಕಫ್ರ್ಯೂ ಹಿನ್ನೆಲೆ ಕಂಪ್ಲಿ ಪಟ್ಟಣದಲ್ಲಿ ಸಾರ್ವಜನಿಕರಿಂದ ವ್ಯಾಪಕ ಸ್ಪಂದನೆ ದೊರಕಿದೆ.
ಶನಿವಾರ ಬೆಳಗ್ಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿನಿತ್ಯದಂತೆ ಹಾಲು,ದಿನಸಿ,ತರಕಾರಿ,ಹಣ್ಣು, ಮೆಡಿಕಲ್ ಸೇರಿದಂತೆ ಅಗತ್ಯ ಸೇವೆಗಳು ಆರಂಭಗೊಂಡಿದ್ದವು. ಬೆಳಗ್ಗೆ 10 ಗಂಟೆ ಸುಮಾರಿನಷ್ಟೊತ್ತಿಗೆ ಮೆಡಿಕಲ್ ಶಾಪ್, ಆಸ್ಪತ್ರೆಗಳನ್ನು ಹೊರತುಪಡಿಸಿ ಬಹುತೇಕ ಬೀದಿ ಬದಿ ವ್ಯಾಪಾರ, ಹಾಲು, ದಿನಸಿ ಸೇರಿದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳೆಲ್ಲವನ್ನು ಮುಚ್ಚಲಾಯಿತು. ಇನ್ನು ಬೆಳಗ್ಗೆ 10 ಗಂಟೆಯಾದರು ಇಲ್ಲಿನ ಎಸ್ ಎಂಜಿಜೆ ಕಾಲೇಜು ಆವರಣ ಮುಂಭಾಗ, ಅಂಬೇಡ್ಕರ್ ವೃತ್ತ, ದಿನವಹಿ ಮಾರುಕಟ್ಟೆ ಪ್ರದೇಶ ಸೇರಿದಂತೆ ಕೆಲವೆಡೆಗಳಲ್ಲಿ ತರಕಾರಿ ವ್ಯಾಪಾರಿಗಳು ವ್ಯಾಪಾರ ಮುಂದುವರೆಸಿದ್ದರು. ಬಳಿಕ ರಸ್ತೆಗಿಳಿದ ಪೊಲೀಸರು ವ್ಯಾಪಾರಿಗಳಿಗೆ ಮನವರಿಕೆ ಮಾಡುವ ಮೂಲಕ ಮನೆಗಳಿಗೆ ತೆರಳುವಂತೆ ಸೂಚಿಸಿದರು. ಪೊಲೀಸರ ಸೂಚನೆ ಮೇರೆಗೆ ವ್ಯಾಪಾರಿಗಳು ಮನೆ ಕಡೆಗೆ ತೆರಳಿದ ದೃಶ್ಯ ಕಂಡುಬಂದವು.
ಪಟ್ಟಣದಿಂದ ದೂರದೂರಿಗೆ ತೆರಳುವ ಸರ್ಕಾರಿ ಬಸ್ ಗಳ ಸಂಚಾರ ಎಂದಿನಂತೆ ಇತ್ತು. ಕೊರೋನಾ ಕಫ್ರ್ಯೂ ನಿಯಮಗಳನ್ನು ಸಾರ್ವಜನಿಕರು ಉಲ್ಲಂಘಿಸದ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪಟ್ಟಣದ ಬಹುತೇಕ ಕಡೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಅನಗತ್ಯವಾಗಿ ರಸ್ತೆಗಿಳಿಯುವ ಜನರನ್ನು ವಿಚಾರಣೆ ನಡೆಸಿ ತುರ್ತು ಸೇವೆ ಹಾಗು ಸಕಾರಣಗಳನ್ನೊಳಗೊಂಡ ಜನರ ಓಡಾಟಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು.
ಒಟ್ಟಾರೆಯಾಗಿ, ಕಳೆದ ವರ್ಷದ ಲಾಕ್ ಡೌನ್ ಗೆ ತುಲನೆ ಮಾಡಿದಾಗ ಈ ಬಾರಿಯ ಮೊದಲ ವೀಕೆಂಡ್ ಕಫ್ರ್ಯೂಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಲಭಿಸಿದೆ ಅಂತ ಹೇಳಬಹುದಾಗಿದೆ.