ಬೆಂಗಳೂರು, ಮಾ.೯- ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೆ ಬಿಂಬಿಸಲಾಗಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಇಂದಿನಿಂದ ರಾಜ್ಯಾದ್ಯಂತ ಆರಂಭವಾಗಿದೆ. ನಕಲು ತಡೆಗೆ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮೊದಲ ದಿನ ಇಂದು ಬೆಳಗ್ಗೆ ೧೦.೧೫ರಿಂದ ೧.೩೦ರವರೆಗೆ ಕನ್ನಡ ಪರೀಕ್ಷೆ ನಡೆಯಿತು. ಮತ್ತೊಂದೆಡೆ ಸಮವಸ್ತ್ರ ಕಡ್ಡಾಯಗೊಳಿಸಿರುವ ಹಿನ್ನೆಲೆ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಬರೆದರು. ಹೀಗಾಗಿ ಮೊದಲ ದಿನ ಪರೀಕ್ಷೆ ಸುಸೂತ್ರವಾಗಿ ನಡೆಯಿತು.
ಪರೀಕ್ಷಾ ಕೇಂದ್ರಗಳ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸರನ್ನು ನಿಯೋಜಿಸಲಾಗಿದೆ. ಎಲ್ಲ ಪರೀಕ್ಷಾ ಕೊಠಡಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
ಭೇಟಿ:ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿರುವ ತಿಪಟೂರಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ್ ಅವರು ಭೇಟಿ ನೀಡಿ ಪರೀಕ್ಷಾ ಕೊಠಡಿಗಳನ್ನು ಪರಿಶೀಲಿಸಿದರು. ಬಳಿಕ ಕಾಲೇಜು ಆವರಣದಲ್ಲಿ ಪರೀಕ್ಷಾರ್ಥಿಗಳೊಂದಿಗೆ ಮಾತನಾಡಿ ಸಂವಾದ ನಡೆಸಿ ಆತಂಕವಿಲ್ಲದೆ ಷರೀಫ್ ಬರೆಯುವಂತೆ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಈ ಬಾರಿ ೧,೧೦೯ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಪರೀಕ್ಷೆಗೆ ೭.೨೬ ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ೭,೨೬,೧೯೫ ವಿದ್ಯಾರ್ಥಿಗಳಲ್ಲಿ ೩,೬೩,೬೯೮ ಬಾಲಕರು ಮತ್ತು ೩,೬೨,೪೯೭ ಬಾಲಕಿಯರು ಸೇರಿದ್ದಾರೆ. ಒಟ್ಟು ೫,೭೧೬ ಕಾಲೇಜುಗಳಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಇನ್ನೂ, ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ಎಚ್ಚರವಹಿಸಲು ೧,೧೦೯ ಸಹ ಮುಖ್ಯ ಅಧೀಕ್ಷಕರು, ೬೪ ಜಿಲ್ಲಾ ಜಾಗೃತ ದಳ, ೫೨೫ ತಾಲೂಕು ಜಾಗೃತ ದಳ ಮತ್ತು ೨೩೭೩ ವಿಶೇಷ ಜಾಗೃತ ದಳದವರನ್ನು ನೇಮಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಈ ವರ್ಷ ಕರ್ನಾಟಕ ಸೆಕ್ಯೂರ್ ಎಕ್ಸಾಂ ವ್ಯವಸ್ಥೆಯನ್ನು ಮುಂದುವರಿಸಿದ್ದು, ಇದರ ನಿರ್ವಹಣೆಗೆ ಮಂಡಳಿಯಲ್ಲೇ ಸಿಸಿಟಿವಿ ನಿಗಾ ಕೇಂದ್ರ ರೂಪಿಸಿದೆ.
ಇಲ್ಲಿ ೨೪/೭ ಕಣ್ಗಾವಲಿನಲ್ಲಿರಲಿದೆ. ಎಂದಿನಂತೆ ಟ್ಯೂಷನ್ ಸೆಂಟರ್, ತರಬೇತಿ ಕೇಂದ್ರಗಳು, ಜೆರಾಕ್ಸ್ ಅಂಗಡಿಗಳು, ಸೈಬರ್ ಕೇಂದ್ರಗಳು, ಕಂಪ್ಯೂಟರ್ ಕೇಂದ್ರ ಮತ್ತು ಗೇಮ್ ಸೆಂಟರ್‌ಗಳನ್ನು ಬಂದ್ ಮಾಡಿಸಿ ನಿಗಾವಹಿಸಲು ಕ್ರಮ ತೆಗೆದುಕೊಂಡಿದೆ ಎಂದರು.
ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ರವಾನಿಸುವವರ ಮೇಲೆ ಕ್ರಮ ಜರುಗಿಸಲಾಗುವುದು. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್ ಬಳಕೆ ಸಂಪೂರ್ಣವಾಗಿ ನಿಷೇಧೊಸಲಾಗಿದೆ. ಭದ್ರತಾ ಕೇಂದ್ರಗಳ ಬಳಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ವರ್ಗದವರ ಗಸ್ತು ನಿರ್ವಹಣೆ ಮಾಡಲಿದ್ದು, ಅನುಮಾನಸ್ಪದವಾಗಿ ನಡೆದುಕೊಳ್ಳುವವರನ್ನು ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹಿಜಾಬ್ ತೆಗೆದ ವಿದ್ಯಾರ್ಥಿನಿ…!
ನಗರದ ಮಲ್ಲೇಶ್ವರಂನ ಕಾಲೇಜಿನಲ್ಲಿ ೨ ವಿದ್ಯಾರ್ಥಿನಿಯೊಬ್ಬರು ಹಿಜಾಬ್ ಧರಿಸಿಕೊಂಡು ಪರೀಕ್ಷೆ ಬರೆಯಲು ಬಂದಿದ್ದರು. ಇದನ್ನು ಗಮನಿಸಿದ ಕಾಲೇಜು ಪ್ರಾಂಶುಪಾಲರು ಹಿಜಾಬ್ ತೆಗೆಯುವಂತೆ ವಿದ್ಯಾರ್ಥಿನಿಗೆ ಸೂಚನೆ ಕೊಟ್ಟಿದ್ದಾರೆ.
ಆದರೆ ಪರೀಕ್ಷೆ ಶುರುವಾಗಲು ಕೆಲವೇ ಸಮಯವಿದ್ದರೂ ಆ ವಿದ್ಯಾರ್ಥಿನಿ ಹಿಜಾಬ್ ತೆಗೆಯದೇ ಹಾಗೇ ಕುಳಿತ್ತಿದ್ದಳು. ನಂತರ ಸರ್ಕಾರದ ನಿಯಮ ಇರುವುದರಿಂದ ಕೊನೆಗೆ ವಿದ್ಯಾರ್ಥಿನಿ ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ಕೊಠಡಿಯೊಳಗೆ ಹೋಗಿದ್ದಾರೆ.
ಶುಭಾ ಕೋರಿದ ಸಿಎಂ
ಇಂದಿನಿಂದ ಆರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಸಜ್ಜಾಗಿರುವ ನನ್ನೆಲ್ಲಾ ಪ್ರೀತಿಯ ವಿದ್ಯಾರ್ಥಿಗಳಿಗೆ ಶುಭಾಶಯಗಳು. ಭಯ, ಆತಂಕ ಬಿಟ್ಟು ಧೈರ್ಯದಿಂದ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ, ಯಶಸ್ಸು ನಿಮ್ಮದಾಗಲಿ ಎಂದು ದ್ವಿತೀಯ ಪಿಯು ಪರೀಕ್ಷಾರ್ಥಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್? ಮೂಲಕ ಶುಭ ಕೋರಿದ್ದಾರೆ.