ಮೊದಲ ದಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಸೂತ್ರ

ಸಿಸಿಟಿವಿ ಕಣ್ಗಾವಲು
ಬೆಂಗಳೂರು, ಮಾ.೩೧- ಉನ್ನತ ಶಿಕ್ಷಣಕ್ಕೆ ಭವಿಷ್ಯರ ಬಾಗಿಲು ಎಂದೇ ಬಿಂಬಿಸಲಾಗಿರುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಇಂದಿನಿಂದ ರಾಜ್ಯಾದ್ಯಂತ ಆರಂಭವಾಗಿದ್ದು, ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ಸುಸೂತ್ರವಾಗಿ ನಡೆಯಿತು.ಈ ಬಾರಿಯೂ ಹಿಜಾಬ್ ಸೇರಿದಂತೆ ಯಾವುದೇ ಧರ್ಮಾಧಾರಿತ ಉಡುಪು ತೊಟ್ಟು ಬಂದರೆ ಪರೀಕ್ಷಾ ಕೊಠಡಿಗೆ ತೆರಳಲು ಅವಕಾಶ ನೀಡುವುದಿಲ್ಲ ಎಂಬ ಕಟ್ಟುನಿಟ್ಟಿನ ನಿಯಮ ಹಿನ್ನೆಲೆ ಪರೀಕ್ಷಾ ಕೊಠಡಿವರೆಗೆ ಹಿಜಾಬ್ ಧರಿಸಿಬಂದ ಕೆಲ ವಿದ್ಯಾರ್ಥಿನಿಯರು ಆನಂತರ ಅದನ್ನು ತೆಗೆದು ಪರೀಕ್ಷಾ ಕೊಠಡಿ ಪರೀಕ್ಷೆ ಬರೆದರು.ಬೆಳಿಗ್ಗೆ ೯ರಿಂದಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳತ್ತ ಹೆಜ್ಜೆ ಹಾಕಿದರು. ತಮ್ಮ ನೋಂದಣಿ ಸಂಖ್ಯೆಗಳು ಇರುವ ಕೊಠಡಿ ಹುಡುಕುತ್ತ, ಕಡೆಯ ಕ್ಷಣಗಳಲ್ಲಿ ಓದಿನ ಕಸರತ್ತು ನಡೆಸುತ್ತಿದ್ದ ದೃಶ್ಯ ಕಂಡು ಬಂತು.ಮತ್ತೊಂದೆಡೆ ಆತಂಕದಿಂದ ಪ್ರವೇಶ ಪ್ರತಿ ನೋಡುತ್ತಿರುವ ವಿದ್ಯಾರ್ಥಿಗಳು ಒಂದೆಡೆಯಾದರೆ, ಚೆನ್ನಾಗಿ ಪರೀಕ್ಷೆ ಬರೆಯುವಂತೆ ಶುಭ ಹಾರೈಸುತ್ತಿರುವ ಪೋಷಕರ ದೃಶ್ಯ ಎಂದು ಎಲ್ಲಾ ಕಡೆ ಸಾಮಾನ್ಯವಾಗಿತ್ತು. ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇದ್ದು, ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.ರಾಜ್ಯದ ೩,೩೦೫ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಇಂದು ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ (೧೦೦ ಅಂಕಗಳು) ಪರೀಕ್ಷೆ ಜರುಗಿತು.ಹಾಗೇ, ಏಪ್ರಿಲ್ ೩ರಂದು ಗಣಿತ (೮೦ ಅಂಕಗಳು), ೬ರಂದು ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ (೮೦ ಅಂಕಗಳು), ೮ರಂದು ಎಂಜಿ ನಿಯರಿಂಗ್, ಅರ್ಥಶಾಸ್ತ್ರ ಸೇರಿ ದಂತೆ ಇತರೆ ವಿಷಯಗಳ (ಜೆಟಿಎಸ್ ಶಾಲೆಯ ವಿದ್ಯಾರ್ಥಿಗಳಿಗೆ) ಪರೀಕ್ಷೆಗಳು ನಡೆಯಲಿವೆ.
ಈ ಬಾರಿ ಶಾಲಾ ವಿದ್ಯಾರ್ಥಿಗಳು ೭,೯೪,೬೧೧, ಪುನರಾವರ್ತಿತ ವಿದ್ಯಾರ್ಥಿಗಳು, ೨೦,೭೫೦, ಖಾಸಗಿ ಅಭ್ಯರ್ಥಿಗಳು ೧೮,೨೭೨, ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು ೮,೮೫೯ ಪರೀಕ್ಷೆ ಬರೆಯಲಿದ್ದಾರೆ.ವಿದ್ಯಾರ್ಥಿಗಳು ಮೊಬೈಲ್‌ಫೋನ್, ಸ್ಮಾರ್ಟ್‌ವಾಚ್, ಇಯರ್‌ಫೋನ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ನಿಷೇಧ ಮಾಡಲಾಗಿತ್ತು.ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ ಕಲ್ಪಿಸಲಾಗಿದೆ.

ಇಂದಿನಿಂದ ಎಸ್‌ಎಸ್‌ಲ್‌ಸಿ ಪರೀಕ್ಷೆ ಆರಂಭವಾಗಿದೆ. ವಿದ್ಯಾರ್ಥಿಗಳು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದು ಹೀಗೆ——-

  ಅಕ್ರಮ ತಡೆಗೆ ನಿಗಾ..!
  ಪರೀಕ್ಷಾ ಅಕ್ರಮ ತಡೆಗಟ್ಟುವ ಹಿನ್ನೆಲೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪರೀಕ್ಷಾ ಕೇಂದ್ರಗಳಲ್ಲಿ ನಿಗಾ ವಹಿಸಿದೆ. ಪರೀಕ್ಷಾ ಕೇಂದ್ರಗಳ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
  ಜತೆಗೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತಾದ ಯಾವುದೇ ಗೊಂದಲಗಳಿದ್ದಲ್ಲಿ ಮಾಹಿತಿಗೆ ೦೮೦ -೨೩೩೧೦೦೭೫/೭೬ ಸಂಪರ್ಕಿಸಬಹುದಾಗಿದೆ.

  ವಿದ್ಯಾರ್ಥಿಗಳು ಮೊಬೈಲ್‌ಫೋನ್, ಸ್ಮಾರ್ಟ್‌ವಾಚ್, ಇಯರ್‌ಫೋನ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ತರದಂತೆ ನಿಷೇಧ ಹೇರಲಾಗಿದೆ. ಬೆಳಗ್ಗೆ ೧೦:೩೦ ರಿಂದ ಮಧ್ಯಾಹ್ನ ೧:೪೫ಕ್ಕೆ ಪರೀಕ್ಷೆ ಮುಗಿಯಲಿದೆ.

  ಎಷ್ಟು ವಿದ್ಯಾರ್ಥಿಗಳು?

  • ಒಟ್ಟು ೮,೪೨,೮೧೧ ವಿದ್ಯಾರ್ಥಿಗಳು ನೋಂದಣಿಯಾಗಿದ್ದು ರಾಜ್ಯದಲ್ಲಿ ಒಟ್ಟು ೩,೩೦೫ ಪರೀಕ್ಷಾ ಕೇಂದ್ರಗಳು ಸ್ಥಾಪನೆ ಆಗಿವೆ.
  • ಶಾಲಾ ವಿದ್ಯಾರ್ಥಿಗಳು:- ೭,೯೪,೬೧೧
  • ಪುನರಾವರ್ತಿತ ವಿದ್ಯಾರ್ಥಿಗಳು -೨೦,೭೫೦
  • ಖಾಸಗಿ ಅಭ್ಯರ್ಥಿಗಳು- ೧೮,೨೭೨
  • ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು:- ೮,೮೫೯
  • ೨೦೧೦ ಕ್ಕಿಂತ ಹಿಂದಿನ ಸಾಲಿನ ಪುನರಾವರ್ತಿತ ಅಭ್ಯರ್ಥಿಗಳು ೩೦೧
  • ೨೦೧೦ ಕ್ಕಿಂತ ಹಿಂದಿನ ಸಾಲಿನ ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು ೧೫ ಪರೀಕ್ಷೆಗೆ ನೋಂದಣಿ

  ಸಿಎಂ ಶುಭ ಹಾರೈಕೆ
  ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿರುವ ನನ್ನೆಲ್ಲಾ ಪ್ರಿಯ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು. ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ಯಶಸ್ಸು ನಿಮ್ಮದಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅದೇ ರೀತಿ, ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು ಶುಭ ಹಾರೈಸಿದ್ದಾರೆ.