ಮೊದಲ ಆಸ್ಕರ್ ವಿಜೇತೆ ವಸ್ತ್ರ ವಿನ್ಯಾಸಕಿ ಭಾನು ಅಥೈಯಾ ನಿಧನ

ಮುಂಬೈ, ಅ 16 – ಖ್ಯಾತ ವಸ್ತ್ರ ವಿನ್ಯಾಸಕಿ ಹಾಗೂ ಭಾರತದ ಮೊದಲ ಆಸ್ಕರ್ ಪ್ರಶಸ್ತಿ ವಿಜೇತೆ ಭಾನು ಅಥೈಯಾ (91) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಭಾನು ಅಥೈಯಾ ಗುರುವಾರ ಅಕ್ಟೋಬರ್ 15ರಂದು ಕೊನೆಯುಸಿರೆಳೆದರು ಎಂದು ಅವರ ಪುತ್ರಿ ರಾಧಿಕಾ ಗುಪ್ತಾ ತಿಳಿಸಿದ್ದಾರೆ.

”ಎಂಟು ವರ್ಷಗಳ ಹಿಂದೆ, ಭಾನು ಅವರಿಗೆ ಮೆದುಳಿನಲ್ಲಿ ಗೆಡ್ಡೆಯೊಂದು ಪತ್ತೆಯಾಗಿತ್ತು. ಕಳೆದ ಮೂರು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ಮತ್ತೊಂದು ಕಡೆ ದೇಹ ಪಾರ್ಶ್ವವಾಯುವಿಗೆ ಒಳಗಾಗಿತ್ತು. ಇಂದು ಮುಂಜಾನೆ ಮಲಗಿದ್ದಾಗಲೇ ಇಹಲೋಕ ತ್ಯಜಿಸಿದರು” ಎಂದು ಆಕೆ ಮಾಹಿತಿ ನೀಡಿದ್ದಾರೆ.
ಗುರುದತ್ ನಿರ್ಮಿಸಿದ 1956ರ ಸೂಪರ್ ಹಿಟ್ ಚಿತ್ರ ‘ಸಿ.ಐ.ಡಿ’ ಚಿತ್ರದ ಮೂಲಕ ಅಥೈಯಾ ಕಾಸ್ಟ್ಯೂಮ್ ಡಿಸೈನರ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. 1982 ರಲ್ಲಿ ರಿಚರ್ಡ್ ಅಟೆನ್‌ಬರೋ ನಿರ್ದೇಶನದ ‘ಗಾಂಧಿ’ ಚಿತ್ರದಲ್ಲಿ ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ಅಕಾಡೆಮಿ ಪ್ರಶಸ್ತಿ ಆಸ್ಕರ್ ಗೆದ್ದರು. 2012 ರಲ್ಲಿ ತನ್ನ ಆಸ್ಕರ್ ಪ್ರಶಸ್ತಿಯನ್ನು ಸುರಕ್ಷಿತವಾಗಿಡಲು ಅಕಾಡೆಮಿಗೆ ಹಿಂದಿರುಗಿಸಿದರು.

ಐದು ದಶಕಗಳ ವೃತ್ತಿಜೀವನದಲ್ಲಿ ಅಥೈಯಾ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 1990ರಲ್ಲಿ ಲೆಕಿನ್ ಚಿತ್ರಕ್ಕಾಗಿ ಹಾಗೂ 2001 ರ ಅಶುತೋಷ್ ಗೋವಾರಿಕರ್ ನಿರ್ದೇಶನದ ‘ಲಗಾನ್’ ಚಿತ್ರದ ವಸ್ತ್ರ ವಿನ್ಯಾಸಕ್ಕಾಗಿ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು