ಮೊದಲು ಪ್ರಧಾನಿ ಲಸಿಕೆ ಪಡೆಯಲಿ : ತೇಜಸ್ವಿ ಸವಾಲು

ಪಾಟ್ನಾ,ಜ.೮-ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಕೊರೊನಾ ಲಸಿಕೆ ತೆಗೆದುಕೊಳ್ಳಲಿ, ನಂತರವಷ್ಟೇ ನಾವು ಲಸಿಕೆ ಪಡೆದುಕೊಳ್ಳುವುದಾಗಿ ಆರ್.ಜೆ.ಡಿ.ನಾಯಕ ತೇಜ್ ಪ್ರತಾಪ್ ಯಾದವ್ ಸವಾಲೆಸೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೇನು ಕೆಲವೇ ದಿನಗಳಲ್ಲಿ ಕೊರೊನಾ ಲಸಿಕೆ ಭಾರತೀಯರ ಕೈ ಸೇರಲಿದೆ. ಈ ಲಸಿಕೆಯ ಬಗ್ಗೆ ಪ್ರತಿಪಕ್ಷದವರು ತೀವ್ರ ಟೀಕೆ ವ್ಯಕ್ತಪಡಿಸುತ್ತಿದ್ದು, ಇದೀಗ ಆರ್.ಜೆ.ಡಿ.ನಾಯಕ ತೇಜ್ ಪ್ರತಾಪ್ ಯಾದವ್ ಅವರು ಕೂಡ ಟೀಕಿಸಿದ್ದಾರೆ.
ಕೋವಿಡ್-೧೯ ನಿರೋಧಕ ದೇಶಿ ಲಸಿಕೆ ಕುರಿತಂತೆ ಯಾವುದೇ ಅಪಪ್ರಚಾರ ಮಾಡಬೇಡಿ ಎಂದು ಬಿಜೆಪಿ ನಾಯಕರು ಮನವಿ ಮಾಡುತ್ತಿರುವ ಬೆನ್ನಲ್ಲೆ ಆರ್.ಜೆ.ಡಿ.ನಾಯಕ ಈ ರೀತಿ ಹೇಳಿರುವುದು ಬಿಜೆಪಿ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ.
ಒಟ್ಟಿನಲ್ಲಿ ಕೊರೊನಾ ಲಸಿಕೆ ವಿತರಣೆ ಸಿದ್ಧತೆ ನಡೆಯುತ್ತಿದ್ದಂತೆಯೇ ಇತ್ತ ಅದರಲ್ಲಿ ರಾಜಕೀಯ ಕೂಡ ಆರಂಭವಾಗಿದೆ. ಈ ಹಿಂದೆ ಭಾರತ ಬಯೋಟೆಕ್ ಸಂಸ್ಥೆಯ ಲಸಿಕೆ ಕೋವ್ಯಾಕ್ಸಿನ್ ಗೆ ಅನುಮತಿ ನೀಡಿರುವ ಬಗ್ಗೆ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಹಾಗೂ ಜೈರಾಮ್ ರಮೇಶ ಪ್ರಶ್ನೆ ಮಾಡಿದ್ದರು.
ಇನ್ನು ಸಮಾಜವಾದಿ ಪಕ್ಷದ ನಾಯಕ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡ ಬಿಜೆಪಿ ಲಸಿಕೆಯಲ್ಲಿ ನನಗೆ ನಂಬಿಕೆ ಇಲ್ಲ ಎಂದು ಹೇಳುವ ಮೂಲಕ ಭಾರಿ ಚರ್ಚೆಗೆ ಗ್ರಾಸವಾಗಿದ್ದರು. ಸದ್ಯಕ್ಕೆ ನಾನು ಲಸಿಕೆ ಹಾಕಲು ಹೋಗುತ್ತಿಲ್ಲ. ಬಿಜೆಪಿಯ ಲಸಿಕೆಯನ್ನು ನಾನು ಹೇಗೆ ನಂಬುವುದು ಎಂದು ಪ್ರಶ್ನಿಸಿದ್ದರು. ನಮ್ಮ ಸರ್ಕಾರ ರಚನೆಯಾದಾಗ ಎಲ್ಲರಿಗೂ ಉಚಿತ ಲಸಿಕೆ ಸಿಗುತ್ತದೆ. ಬಿಜೆಪಿಯ ಲಸಿಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಇದೀಗ ಆರ್.ಜೆ.ಡಿ.ನಾಯಕ ತೇಜ್ ಪ್ರತಾಪ್ ಯಾದವ್ ಕೂಡ ಟೀಕೆ ವ್ಯಕ್ತಪಡಿಸಿದ್ದು, ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕೆ ತೆಗೆದುಕೊಳ್ಳಲಿ, ಅನಂತರ ನಾವು ಪಡೆಯುವುದಾಗಿ ಸವಾಲೆಸೆದಿದ್ದಾರೆ.