ಮೊದಲನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಜಿಲ್ಲೆಯಲ್ಲಿ ಶೇ.74.86 ರಷ್ಟು ಮತದಾನ; ಡಿ. 24ಕ್ಕೆ ಕಿಣ್ಣಿ ಸಡಕ ಕ್ಷೇತ್ರದ ಮರು ಮತದಾನ

ಕಲಬುರಗಿ.ಡಿ.22:ಗ್ರಾಮ ಪಂಚಾಯಿತಿಯ ಸಾರ್ವತ್ರಿಕ-2020ರ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಆರು ತಾಲೂಕುಗಳಲ್ಲಿ ಮೊದಲನೇ ಹಂತದ ಮತದಾನವು ಮಂಗಳವಾರ ಶಾಂತಿಯುತವಾಗಿ ನಡೆದಿದ್ದು, ಒಟ್ಟು ಶೇ.74.86 ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ವಿ. ಜೋತ್ಸ್ನಾ ಅವರು ತಿಳಿಸಿದ್ದಾರೆ.

ಕಲಬುರಗಿ ತಾಲೂಕು ಶೇ. 76.39 ರಷ್ಟು, ಆಳಂದ ಶೇ.75.12 ರಷ್ಟು, ಅಫಜಲಪುರ ಶೇ.77.09ರಷ್ಟು, ಕಮಲಾಪುರ ಶೇ.72.96ರಷ್ಟು, ಕಾಳಗಿ ಶೇ.72.57 ರಷ್ಟು ಹಾಗೂ ಶಹಾಬಾದ ಶೇ.63.34 ರಷ್ಟು ಮತದಾನವಾಗಿದೆ.

ಮತ ಚಲಾಯಿಸುವ ಹಕ್ಕು ಹೊಂದಿದ ಒಟ್ಟು 7,02,909 ಮತದಾರರ ಪೈಕಿ 5,26,188 ಮತದಾರರು ಮತ ಚಲಾಯಿಸಿದ್ದು, ಇದರಲ್ಲಿ 2,74,132 ಪುರುಷರು ಹಾಗೂ 2,52,056 ಮಹಿಳಾ ಮತದಾರರು ಇದ್ದಾರೆ. ಮೊದಲ ಹಂತದಲ್ಲಿ ಒಟ್ಟು 126 ಗ್ರಾಮ ಪಂಚಾಯಿತಿಗಳ 961 ಮತಗಟ್ಟೆಗಳಲ್ಲಿ ಮತದಾನ ನಡೆಯಿತು.
ಜಿಲ್ಲೆಯಲ್ಲಿ ಮೊದಲನೆ ಹಂತದ ಚುನಾವಣೆಯಲ್ಲಿ ಒಟ್ಟು 141 ಸದಸ್ಯರು ಅವಿರೊಧವಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ 36 ಮತಗಟ್ಟೆಗಳಲ್ಲಿ ಚುನಾವಣೆ ಜರುಗಿರುವುದಿಲ್ಲ
ಮರು ಮತದಾನ : ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲೂಕಿನ 2-ಕಿಣ್ಣಿ ಸಡಕ ಗ್ರಾಮ ಪಂಚಾಯತಿಯ 1-ಕಿಣ್ಣಿ ಸಡಕ ಕ್ಷೇತ್ರಕ್ಕೆ ಅನುಸೂಚಿತ ಜಾತಿ ಮೀಸಲಾತಿಗೆ ಸ್ಪರ್ಧಿಸಿರುವ ಅಭ್ಯರ್ಥಿಯ ಚಿನ್ಹೆ ಬದಲಾವಣೆ ಆಗಿರುವ ಹಿನ್ನೆಲೆಯಲ್ಲಿ ದಿನಾಂಕ: 24.12.2020 ರಂದು ಈ ಕ್ಷೇತ್ರಕ್ಕೆ ಮರು ಮತದಾನ ಮಾಡಲು ಪರವಾನಿಗಿ ನೀಡಲು ಕೋರಿ ರಾಜ್ಯ ಚುನಾವಣಾ ಆಯೋಗಕ್ಕೆ ಕೋರಿಕೆ ಸಲ್ಲಿಸಲಾಗಿತ್ತು. ಇದೇ ಡಿಸೆಂಬರ್ 24 ರಂದು ಮರು ಮತದಾನ ಮಾಡುವಂತೆ ಚುನಾವಣಾ ಆಯೋಗ ಆದೇಶ ನೀಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.