ಮೊದಲನೇ ದಿನ 8 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಕಲಬುರಗಿ,ಏ.13:ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ 2023ರ ಮೇ 10ರಂದು ನಡೆಯಲಿರುವ ಚುನಾವಣೆಗೆ ಗುರುವಾರ ಚುನಾವಣಾ ಅಧಿಸೂಚನೆಯನ್ನು ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳು ಹೊರಡಿಸಿದ್ದು, ಮೊದಲನೇ ದಿನವೇ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 8 ಅಭ್ಯರ್ಥಿಗಳಿಂದ 8 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಅವರು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಕೆಯ ಪ್ರಥಮ ದಿನವಾದ ಇಂದು ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ ಅಫಜಲಪುರ, ಸೇಡಂ, ಗುಲಬರ್ಗಾ (ದಕ್ಷಿಣ) ಹಾಗೂ ಆಳಂದ ವಿಧಾನಸಭಾ ಕ್ಷೇತ್ರಗಳÀಲ್ಲಿ ನಾಮಪತ್ರಗಳು ಸಲ್ಲಿಕೆಯಾಗಿವೆ. ಇನ್ನುಳಿದ 5 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರ ಇಂತಿದೆ. 34-ಅಫಜಲಪುರ ವಿಧಾನಸಭಾ ಕ್ಷೇತ್ರ: ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಮಾಲೀಕಯ್ಯ ವೆಂಕಯ್ಯ ಗುತ್ತೇದಾರ್, ಪಕ್ಷೇತರ ಅಭ್ಯರ್ಥಿಯಾಗಿ ನಿತೀನ ತಂದೆ ವೆಂಕಯ್ಯ ಗುತ್ತೇದಾರ್ ಹಾಗೂ ಜನತಾದಳ (ಜಾತ್ಯಾತೀತ) ಪಕ್ಷದ ಅಭ್ಯರ್ಥಿಯಾಗಿ ಶಿವಕುಮಾರ ಮಲಕಪ್ಪ ನಾಟೀಕಾರ ಅವರು ತಲಾ 1 ನಾಮಪತ್ರ ಸಲ್ಲಿಸಿದ್ದಾರೆ.
41-ಸೇಡಂ ವಿಧಾನಸಭಾ ಕ್ಷೇತ್ರ: ಜನತಾದಳ (ಜಾತ್ಯಾತೀತ) ಪಕ್ಷದ ಅಭ್ಯರ್ಥಿಯಾಗಿ ಬಾಲರಾಜ್ ಅಶೋಕ ಗುತ್ತೇದಾರ್ ಅವರು 1 ನಾಮಪತ್ರ ಸಲ್ಲಿಸಿದ್ದಾರೆ.
44-ಗುಲಬರ್ಗಾ (ದಕ್ಷಿಣ) ವಿಧಾನಸಭಾ ಕ್ಷೇತ್ರ: ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ದತ್ತಾತ್ರೇಯ ಚಂದ್ರಶೇಖರ ಅವರು 1 ನಾಮಪತ್ರ ಸಲ್ಲಿಸಿದ್ದಾರೆ.
45-ಆಳಂದ ವಿಧಾನಸಭಾ ಕ್ಷೇತ್ರ: ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬೋಜರಾಜ ರಾಮಚಂದ್ರ ಪಾಟೀಲ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸುಭಾಷ ರುಕ್ಮಯ್ಯಾ ಗುತ್ತೇದಾರ್ ಹಾಗೂ ಜನತಾದಳ (ಜಾತ್ಯಾತೀತ) ಪಕ್ಷದ ಅಭ್ಯರ್ಥಿಯಾಗಿ ಮಹೇಶ್ವರಿ ಶಿವಕುಮಾರ ವಾಲಿ ಅವರು ತಲಾ 1 ನಾಮಪತ್ರ ಸಲ್ಲಿಸಿದ್ದಾರೆ.
ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳು ಗುರುವಾರ ಹೊರಡಿಸಿರುವ ಚುನಾವಣಾ ಅಧಿಸೂಚನೆಯನ್ವಯ ಏಪ್ರಿಲ್ 13 ರಿಂದ 20ರ ವರೆಗೆ ಪ್ರತಿದಿನ ಬೆಳಗಿನ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ (ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ) ಅಭ್ಯರ್ಥಿಗಳಿಂದ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ. ಏಪ್ರಿಲ್ 21 ರಂದು ಬೆಳಿಗ್ಗೆ 11 ಗಂಟೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂದಕ್ಕೆ ಪಡೆಯಲು ಏಪ್ರಿಲ್ 24ರಂದು ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ಇರುತ್ತದೆ. ಚುನಾವಣೆಯ ಮತದಾನವು ಮೇ 10ರ ಬೆಳಗಿನ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಜರುಗಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.