ಮೊಟ್ಟಮೊದಲ ಅಭಿನಂದನಾ ಗ್ರಂಥ “ಸಂಭಾವನೆ”

ಮೈಸೂರು:ಮಾ:29: ವೃತ್ತಿಯಲ್ಲಿ ಶೀಘ್ರ ಲಿಪಿಕಾರರಾಗಿದ್ದರೂ ತಮ್ಮಲ್ಲಿರುವ ಸ್ತುಪ ಭಾವನೆಗಳನ್ನು ಪ್ರಕಟಿಸುವಲ್ಲಿ ಎಂ.ಬಿ. ಸಂತೋಷ್ ಮುಂದಾಗಿರುವುದು ಸಂತಸದ ಸಂಗತಿ ಎಂದು ಖ್ಯಾತ ಹಿರಿಯ ಸಾಹಿತಿಗಳಾದ ಸಿ.ಪಿ. ಕೃಷ್ಣಕುಮಾರ್ ಹೇಳಿದರು.
ಅವರು ಇಂದು ಬೆಳಿಗ್ಗೆ ನಗರದ ಪತ್ರಕರ್ತರ ಭವನದಲ್ಲಿ ಸಾಹಿತಿ ಎಂ.ಬಿ. ಸಂತೋಷ್‍ರವರಿಗೆ ಏ:4ರಂದು ನಗರದಲ್ಲಿ ಅವರ ಅಭಿಮಾನಿಗಳ ಬಳಗ್ ವತಿಯಿಂದ ಆಯೋಜಿಸಿರುವ ಸನ್ಮಾನ ಸಮಾರಂಭ ಕುರಿತು ಮಾತನಾಡುತ್ತಾ, ಸಂತೋಷ್‍ರವರು ಕೇವಲ ಸಾಹಿತಿಯಲ್ಲ. ಓರ್ವ ಸಾಮಾಜಿಕ ಧುರೀಣರೂ ಆಗಿದ್ದಾರೆ. ಅವರ ಅನೇಕ ಸಂಘ ಸಂಸ್ಥೆಗಳೊಂದಿಗೆ ಒಡನಾಟ ಇಟ್ಟುಕೊಳ್ಳುವುದರೊಂದಿಗೆ ಬಹು ಮುಖ ಪ್ರತಿಭೆಯುಳ್ಳವರೂ ಆಗಿದ್ದಾರೆ ಎಂದರು.
ಸಾಹಿತ್ಯ ಪ್ರಕಾರಗಳ ಬರವಣಿಗೆ ಶೈಲಿಯಲ್ಲಿ ಜೀವನ ಸವಿಯದೆ ಜಾನಪದ ಸೊಗಡಿನೊಡನೆ ಇತಿಹಾಸವನ್ನು ವೈಭವೀಕರಿಸುವ ಜಾಣ್ಮೆಯೂ ಅವರಲ್ಲಿದೆ. ಕನ್ನಡತ್ವದ ನೆಲೆ-ಬೆಲೆಗಳಲ್ಲಿ ಕನ್ನಡವನ್ನು ಕಟ್ಟುವ ಬೆಳೆಸುವ ಮತ್ತು ಪಸರಿಸುವ ನಿಟ್ಟಿನಲ್ಲಿ ಅವರ ಪಾತ್ರ ಅಗ್ರಗಣ್ಯರಾಗಿರುವ ಸಂತೋಷ್ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿರುವುದರೊಂದಿಗೆ ತಮ್ಮಂತಿಹ ಇನ್ನಿತರ ಸಾಹಿತಿಗಳಿಗೆ ಪ್ರಶಸ್ತಿಗಳನ್ನೂ ನೀಡಿದ್ದಾರೆ ಎಂದರು.
ನನಗೆ ತಿಳಿದಿರುವಂತೆ ಆಚಾರ್ಯ ಬಿ.ಎಂ. ಶ್ರೀಕಂಠಯ್ಯರವರು ರಚಿಸಿರುವ “ಸಂಭಾವನೆ” ಎಂಬ ಅಭಿನಂದನಾ ಗ್ರಂಥ ಮೊಟ್ಟಮೊದಲನೆಯದ್ದಾಗಿದೆ. ನಂತರ ಹಲವಾರು ಸಾಹಿತಿಗಳು ಅನೇಕ ಅಭಿನಂದನಾ ಗ್ರಂಥಗಳನ್ನು ರಚಿಸಿದರು. ಈಗ ಸಂತೋಷ್‍ರವರು ಅದೇ ಹಾದಿಯಲ್ಲಿ ಸಾಗಿ ‘ಸಂತೋಷ್-ಸಂಪ್ರೀತಿ’ ಎಂಬ ಅಭಿನಂದನಾ ಗ್ರಂಥವನ್ನು ನಿವೃತ್ತ ಪ್ರೊ ಕೆ. ಭೈರವಮೂರ್ತಿರವರ ಪ್ರಧಾನ ಪ್ರಧಾನ ಸಂಪಾದಕತ್ವದಲ್ಲಿ ರಚಿಸಿರುವುದು ನನಗೆ ಬಹಳ ಸಂತಸ ತಂದಿದೆ. ಈ ಗ್ರಂಥವು ಪರಿಪೂರ್ಣ ಪಕ್ವವಾಗಿದ್ದು, ಓದುಗರ ಮನಸ್ಸನ್ನು ಗೆಲ್ಲುವಲ್ಲಿ ಯಾವುದೇ ಸಂದೇಹವಿಲ್ಲ ಎಂದು ನುಡಿದ ಸಿಪಿಕೆ ಸಂತೋಷ್‍ರವರಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಗ್ರಂಥಗಳನ್ನು ರಚಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರೊ. ಕೆ. ಭೈರವಮೂರ್ತಿ ಮಾತನಾಡಿ, ಈ ಗ್ರಂಥವು ಅತ್ಯಂತ ಪ್ರಶಸ್ತವಾಗಿದ್ದು, ಇದನ್ನು ಓದುವುದರಿಂದ ಜ್ಞಾನಾರ್ಜನೆ ಹೆಚ್ಚಲಿದೆ. ಇದರಲ್ಲಿ ಸಾಂಸ್ಕøತಿಕ ಮತ್ತು ವೈಜ್ಞಾನಿಕ ವಿಷಯಗಳ ಬಗ್ಗೆಯೂ ಲೇಖನಗಳಿದ್ದು, ಬಾಲ ಪ್ರತಿಭೆಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದರು. ಸಂತೋಷ್‍ರವರು ವೃತ್ತಿ ಮತ್ತು ಪ್ರವೃತ್ತಿಗಳೆರಡೂ ವಿಭಿನ್ನ ದಿಕ್ಕುಗಳಲ್ಲಿದ್ದರೂ ಸರಳ, ಸಜ್ಜನಿಕೆ, ಮಾನವೀಯ ಗುಣಗಳಿಂದ ಮೇಳೈಸಿದ ಮಹಾನ್ ವ್ಯಕ್ತಿ ಎಂದರೆ ಅತಿಶಯೋಕ್ತಿ ಏನಲ್ಲ. ಅವರ ಸಾಧನೆಗಳ ಕನಸ್ಸು ನನಸಾಗಲಿ, ಶ್ರಮ ಸಾರ್ಥಕವಾಗಲಿ ಹಾಗೂ ಕೀರ್ತಿ ಅಜರಾಮರವಾಗಿರಲಿ ಎಂದು ಶುಭ ಹಾರೈಸಿದರು.
ಸುದ್ದಿಗೋಷ್ಠಿಯಲ್ಲಿ ಪುಸ್ತಕದ ರಚನೆಕಾರ ಎಂ.ಬಿ. ಸಂತೋಷ್, ಮಂಜುನಾಥ್, ಮಮತ, ವಾಣಿರಾಜ್ ಉಪಸ್ಥಿತರಿದ್ದರು.