ಮೊಗದೊಮ್ಮೆ ಲಕ್ಷ ಕ್ಯೂಸೆಕ್ಸ್ ದಾಟಿದ ತುಂಗಭದ್ರೆಯ ಹೊರಹರಿವು


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಸೆ,8: ತುಂಗಭಧ್ರೆ ತನ್ನ ಒಡಲನ್ನು ತುಂಬಿಕೊಂಡಿದ್ದೂ ಅಲ್ಲದೆ ಒಂದು ಲಕ್ಷ ಕ್ಯೂಸೆಕ್ಸ್ ಹೊರ ಹರಿವಿನ ಗಡಿಯನ್ನು ದಾಟುವ ಮೂಲಕ ಮೊಗದೊಮ್ಮೆ ತನ್ನ ನಯನಮನೋಹರ ದೃಶ್ಯವನ್ನು ನೋಡುಗರಿಗೆ ಉಣಬಡಿಸುತ್ತಿದ್ದಾಳೆ.
ಈ ವರ್ಷ ವಾಡಿಕೆಗಿಂತ ಅತ್ಯಾಧಿಕ ಮಳೆಯಾಗುತ್ತಿರುವುದು, ಹಾಗೂ ಕಳೆದ ಒಂದುವರೆತಿಂಗಳಿನಿಂದ ನಿರಂತರವಾಗಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ತುಂಬಿಹರಿಯುತ್ತಿರುವ ತುಂಗಭದ್ರೆ ಇದೀಗ ಮೊಗದೊಮ್ಮ ಒಂದು ಲಕ್ಷ ಕ್ಯೂಸೆಕ್ಸ್ ಗಡಿಯನ್ನು ತಲುಪುವ ಮೂಲಕ ಈವೆಗೂ 300 ಟಿಎಂಸಿ ಗೂ ಅಧಿಕ ನೀರನ್ನು ನದಿಗೆ ಹರಿಯಬಿಟ್ಟು ದಾಖಲೆಯತ್ತ ಸಾಗುತ್ತಿದೆ.
ಕಳೆದ ಐದಾರು ದಿನಗಳಿಂದ ನಿರಂತರವಾಗಿ ಉತ್ತಮ ಮಳೆಯಾಗುತ್ತಿರುವುದು ಇಷ್ಟೊಂದು ಪ್ರಮಾಣದ ನೀರು ಹರಿಯಲು ಕಾರಣವಾಗಿದ್ದು ಇದೀಗ ದಾಖಲಾದ ಮಾಹಿತಿಯಂತೆ 98850 ಕ್ಯೂಸೆಕ್ಸ್ ಅಧಿಕ ಒಳಹರಿವು ಆರಂಭವಾಗಿದ್ದು ಮಳೆ ನಿರಂತರವಾಗಿ ಮುಂದುವರೆದರೆ ಇನ್ನಷ್ಟು ವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲವಾಗಿದೆ. ಒತ್ತಡ ನಿಯಂತ್ರಣದ ದೃಷ್ಟಿಯಿಂದ 1.04 ಲಕ್ಷ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಬಿಡುತ್ತಿದ್ದು ನದಿಯಲ್ಲಿ ಅಪಾಯದ ಪ್ರಮಾಣ ಮೀರಿ ನೀರು ಹರಿಯಲು ಕಾರಣವಾಗಿದೆ ಪ್ರಾಯಶಃ ಕಂಪ್ಲಿ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದ್ದು ಎಚ್ಚರಿಕೆ ನೀಡಲಾಗಿದೆ.
ಜಲಾಶಯದ ನೀರಿನ ಮಟ್ಟ;
ಜಲಾಶಯದ ನೀರಿನ ಮಟ್ಟ: 1633 ಅಡಿ, ಇಂದಿನ ಮಟ್ಟ 1632.47 ಅಡಿ, ನೀರು ಸಂಗ್ರಹ ಸಾಮರ್ಥ್ಯ:105.788 ಟಿಎಂಸಿ, ಇಂದಿನ ಮಟ್ಟ 103.660 ಟಿಎಂಸಿ, ಸದ್ಯದ ಒಳಹರಿವು: 98850 ಕ್ಯೂಸೆಕ್ ಸದ್ಯದ ಹೊರಹರಿವು: 104344 ಕ್ಯೂಸೆಕ್ .
ಸಹಜವಾಗಿಯೇ ಹಂಪಿ ಪರಿಸರದಲ್ಲಿ ಅನೇಕ ಮಂಟಪಗಳು ಹಾಗೂ ಐತಿಹಾಸಿಕ ಪುರಂದರ ಮಂಟಪವೂ ಸೇರಿದಂತೆ ಅನೇಕ ಸ್ಮಾರಕಗಳು ಜಲಾವೃತವಾಗಿದ್ದು ಎಂದಿನಂತೆ ಪೊಲೀಸರು ನದಿ ಪಾತ್ರದತ್ತ ಪ್ರವಾಸಿಗರು ಸಾಗದಂತೆ ಎಚ್ಚರಿಕೆ ನೀಡುತ್ತಿದ್ದಾರೆ.
ಜಿಲ್ಲಾಡಳಿತದಿಂದ ಎಚ್ಚರಿಕೆ:
ಮೊಗದೊಮ್ಮೆ ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬಿಡುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿ ಜನ ಜಾನುವಾರು ಸುಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದು ಕಂಪ್ಲಿ ಸೇತುವೆ ಯಾವುದೆ ಕ್ಷಣದಲ್ಲಿ ಮುಳುಗಡೆಯಾಗುವ ಸಾಧ್ಯತೆಯೂ ಇದ್ದು ಎಚ್ಚರಿಕೆಯಿಂದರುವಂತೆ ತಿಳಿಸಲಾಗಿದೆ.