ಮೊಂಟಾನಾದಲ್ಲಿ ಟಿಕ್‌ಟಾಕ್‌ಗೆ ನಿಷೇಧ

ಮೊಂಟಾನಾ (ಅಮೆರಿಕಾ), ಮೇ ೧೮- ಭಾರತದಲ್ಲಿ ಈಗಾಗಲೇ ಟಿಕ್‌ಟಾಕ್‌ಗೆ ನಿಷೇಧ ಹೇರಲಾಗಿದ್ದರೂ ಚೀನಾದ ಪ್ರತಿಸ್ಪರ್ಧಿ ಎಂದೇ ಬಿಂಬಿತವಾಗಿರುವ ಅಮೆರಿಕಾದಲ್ಲಿ ಮಾತ್ರ ಇದಕ್ಕೆ ತಡೆಯೊಡ್ಡುವ ಕಾರ್ಯ ನಡೆದಿಲ್ಲ. ಈ ನಡುವೆ ಮೊಂಟಾನಾ ರಾಜ್ಯದಲ್ಲಿ ವೈಯಕ್ತಿಕ ಮಟ್ಟದಲ್ಲಿ ಟಿಕ್‌ಟಾಕ್‌ಗೆ ನಿಷೇಧ ಹೇರಲಾಗಿದ್ದು, ಈ ಮೂಲಕ ಈ ಕ್ರಮ ತೆಗೆದುಕೊಂಡ ಯುಎಸ್‌ನ ಮೊದಲ ರಾಜ್ಯವಾಗಿದೆ. ಇನ್ನು ಗವರ್ನರ್ ನಿರ್ಧಾರ ಪ್ರಶ್ನಿಸಿ ಟಿಕ್‌ಟಾಕ್ ನ್ಯಾಯಾಲಯ ಮೆಟ್ಟಿಲೇರುವ ಸಾಧ್ಯತೆ ದಟ್ಟವಾಗಿದೆ.
ಕಳೆದ ತಿಂಗಳು ಮೊಂಟಾನಾದ ಶಾಸಕರು ನಾಗರಿಕರ ವೈಯಕ್ತಿಕ ಸಾಧನಗಳಲ್ಲಿ ಟಿಕ್‌ಟಾಕ್ ಅನ್ನು ನಿಷೇಧಿಸುವ ಮಸೂದೆಯನ್ನು ೫೪ ರಿಂದ ೪೩ ಮತಗಳಿಂದ ಅಂಗೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಮೊಂಟಾನಾದ ರಿಪಬ್ಲಿಕನ್ ಪಕ್ಷದ ಗವರ್ನರ್ ಗ್ರೆಗ್ ಜಿಯಾನ್ಫೋರ್ಟೆ ಅವರು ಬುಧವಾರ ನಿಷೇಧಕ್ಕೆ ಸಹಿ ಹಾಕಿದ್ದು, ಜನವರಿ ೧ ರಿಂದ ಆದೇಶ ಜಾರಿಗೆ ಬರಲಿದೆ. ಇನ್ನು ನಿಷೇಧದ ವಿರುದ್ಧ ಸಹಜವಾಗಿಯೇ ಟಿಕ್‌ಟಾಕ್ ಅಸಮಾಧಾನ ಹೊರಹಾಕಿದ್ದು, ಇದೊಂದು ಮೊಂಟಾನಾದ ಜನರ ಮೊದಲ ತಿದ್ದುಪಡಿ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಮೊಂಟಾನಾದ ಒಳಗೆ ಮತ್ತು ಹೊರಗೆ ನಮ್ಮ ಬಳಕೆದಾರರ ಹಕ್ಕುಗಳನ್ನು ರಕ್ಷಿಸಲು ನಾವು ಕೆಲಸ ಮಾಡುವುದನ್ನು ಮುಂದುವರೆಸುತ್ತೇವೆ. ಬಳಕೆದಾರರು ತಮ್ಮನ್ನು ತಾವು ವ್ಯಕ್ತಪಡಿಸಲು, ಜೀವನವನ್ನು ಗಳಿಸಲು ಮತ್ತು ಸಮುದಾಯವನ್ನು ಹುಡುಕಲು ಟಿಕ್‌ಟಾಕ್ ಅನ್ನು ಬಳಸುವುದನ್ನು ಮುಂದುವರಿಸ ಬಹುದು ಎಂದು ಮೊಂಟಾನಾ ನಾಗರಿಕರಿಗೆ ಭರವಸೆ ನೀಡಲು ನಾವು ಬಯಸುತ್ತೇವೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ. ನಾಗರಿಕರ ಅಮೂಲ್ಯ ಮಾಹಿತಿಗಳನ್ನು ಟಿಕ್‌ಟಾಕ್ ಚೀನಾ ಸರ್ಕಾರಕ್ಕೆ ರವಾನಿಸುತ್ತದೆ ಎಂಬ ಪ್ರಬಲ ಆರೋಪ ಹಿಂದಿನಿಂದಲೂ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈಗಾಗಲೇ ಟಿಕ್‌ಟಾಕ್‌ಗೆ ನಿಷೇಧ ಹೇರಿದ್ದು, ವಿಶ್ವದ ಇತರೆ ರಾಷ್ಟ್ರಗಳು ಕೂಡ ನಿಷೇಧಿಸುವ ಕುರಿತು ಚಿಂತನೆ ನಡೆಸಿದೆ. ಆದರೆ ಚೀನಾದ ಪ್ರಬಲ ಶತ್ರುವೆಂದೇ ಗುರುತಿಸಿಕೊಂಡಿರುವ ಅಮೆರಿಕಾದಲ್ಲಿ ಮಾತ್ರ ಅಪ್ಲಿಕೇಶನ್‌ಗೆ ನಿಷೇಧ ಹೇರದಿರುವುದು ಸಹಜವಾಗಿಯೇ ಹಲವರ ಅಚ್ಚರಿಗೆ ಕಾರಣವಾಗಿದೆ. ಇನ್ನು ಚೀನಾ ವಿಚಾರದಲ್ಲಿ ಕೊಂಚ ಸಡಿಲತೆ ಪ್ರದರ್ಶಿಸುವ ಜೋ ಬೈಡೆನ್ ನೀತಿಯ ವಿರುದ್ಧ ಇತರೆ ಭಾಗಗಳಲ್ಲಿ ಆಕ್ರೋಶ ಕೂಡ ಇದೆ. ಇದೇ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷದ, ಮೊಂಟಾನಾದ ಗವರ್ನರ್ ಗ್ರೆಗ್ ಜಿಯಾನ್ಫೋರ್ಟೆ ಅವರು ಇದೀಗ ಟಿಕ್‌ಟಾಕ್‌ಗೆ ವೈಯಕ್ತಿಕ ಮಟ್ಟದಲ್ಲಿ ನಿಷೇಧದ ಅಂಕಿತ ಹಾಕಿದ್ದಾರೆ.