ಮೈ ಕೊರೆಯುವ ಚಳಿಯಲ್ಲಿ ಯೋಧರ ಕಾವಲು

ನವದೆಹಲಿ, ನ ೩-ಪೂರ್ವ ಲಡಾಖ್‌ನಲ್ಲಿ ಮೈ ಕೊರೆಯುವ ಚಳಿಯ ನಡುವೆಯೂ ಯೋಧರು ರೊಟೇಶನ್ ಪದ್ಧತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಚೀನಾ ಜತೆ ಗಡಿ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ಯೋಧರು, ಚಳಿ, ಮಳೆ ಗಾಳಿಯನ್ನು ಲೆಕ್ಕಿಸದೆ ಹಗಲಿರುಳು ಕಾವಲು ಕಾಯುತ್ತಿದ್ದಾರೆ.
ಸೇನೆಯ ಒಂದು ತುಕಡಿ ಲಡಾಖ್‌ನ ಗಡಿಯಲ್ಲಿ ಜಮಾವಣೆಗೊಂಡಿದೆ. ಓರ್ವ ಸೈನಿಕ ೯೦ ದಿನಗಳ ಕಾಲ ಪಾಳಿಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಈ ಅವಧಿ ಮುಗಿದ ಬಳಿಕ ಯೋಧರು ಬೇರೆ ಸ್ಥಳಕ್ಕೆ ವರ್ಗಾವಣೆಯಾಗಲಿದ್ದಾರೆ. ಈ ೯೦ ದಿನಗಳಲ್ಲಿ ಪ್ರಯಾಣದ ಅವಧಿಯೂ ಸೇರಿರುತ್ತದೆ ಎಂದು ಮೂಲಗಳು ತಿಳಿಸಿವೆ.
ಈಗ ಲಡಾಖ್‌ನಲ್ಲಿ ರಕ್ತವನ್ನೇ ಯಪ್ಪುಗಟ್ಟಿಸುವಷ್ಟು ಚಳಿಯ ವಾತಾವರಣ ನಿರ್ಮಾಣವಾಗಿದೆ. ಇದರ ಜತೆಗೆ ಬೆಟ್ಟ ಗುಡ್ಡಗಳಲ್ಲಿ ಶೀತಗಾಳಿ ಜೋರಾಗಿ ಬೀಸುತ್ತಿರುತ್ತದೆ. ಅಷ್ಟೇ ಅಲ್ಲ ಹಿಮವರ್ಷಧಾರೆಯೂ ಹೆಚ್ಚಾಗಿರುತ್ತದೆ. ತಾಪಮಾನ ಮೈನಸ್ ೨೦ ಡಿಗ್ರಿಗೆ ಕುಸಿದಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಕುಸಿಯುವ ಭೀತಿ ಎದುರಾಗಿದೆ. ಇಂತಹ ಪ್ರತಿಕೂಲ ವಾತಾವರಣದ ನಡುವೆಯೂ ರೊಟೇಶನ್ ಪದ್ಧತಿಯಲ್ಲಿ ಯೋಧರು ಕಾರ್ಯನಿರ್ವಹಿಸಲು ಪರಿಣಾಮಕಾರಿ ಕ್ರಮಗಳನ್ನು ಸೇನೆ ಕೈಗೊಂಡಿದೆ.
ಮೈ ಕೊರೆಯುವ ಚಳಿಯಲ್ಲಿ ಕಾರ್ಯನಿರ್ವಹಿಸುವ ವೇಳೆ ಯೋಧರ ಆರೋಗ್ಯದಲ್ಲಿ ಏರುಪೇರಾದರೆ ಅವರಿಗೆ ಚಿಕಿತ್ಸೆ ನೀಡಲು ವೈದ್ಯರ ತಂಡವನ್ನು ಸನ್ನದ್ಧಗೊಳಿಸಲಾಗಿದೆ.
ಇಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಯೋಧರಿಗೆ ಬೆಚ್ಚನೆಯ ಉಡುಪುಗಳನ್ನು ನೀಡಲಾಗಿದೆ. ಈಗಾಗಲೇ ಅಮೆರಿಕದಿಂದ ೧೫೦೦೦ ವಿಶೇಷ ಬಟ್ಟೆಗಳನ್ನು ಮತ್ತು ಪರ್ವಾತರೋಹಣ ಸಾಧನಗಳನ್ನು ತರಿಸಿಕೊಳ್ಳಲಾಗಿದೆ.
ಪ್ರತಿಯೊಂದು ಕಾರ್ಯಾಚರಣೆಯ ಸ್ಥಳದಲ್ಲಿ ಒಂದು ವಾರಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಗರಿಷ್ಠ ಮಟ್ಟದಲಿ ಬಳಸಲಾಗುತ್ತಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.