ಮೈಸೂರು ಸಿಲ್ಕ್ ಸೀರೆ ಉತ್ಪಾದನೆ ಹೆಚ್ಚಿಸಲು ಸಚಿವರ ಸೂಚನೆ

ಬೆಂಗಳೂರು, ಡಿ. ೭- ದೇಶ-ವಿದೇಶದಲ್ಲಿ ಜನಮನ್ನಣೆ ಗಳಿಸಿರುವ ಮೈಸೂರು ಸಿಲ್ಕ್ ಸೀರೆ ಉತ್ಪಾದನೆ ಹೆಚ್ಚಿಸಲು ರೇಷ್ಮೆ ಸಚಿವ ನಾರಾಯಣಗೌಡ ಅವರು ನೀಡಿರುವ ಸೂಚನೆಯಂತೆ ಪ್ರತಿ ತಿಂಗಳು ಒಂದು ಲಕ್ಷ ಮೀಟರ್ ರೇಷ್ಮೆ ಸೀರೆ ಉತ್ಪಾದಿಸುವ ಗುರಿ ನಿಗದಿ ಮಾಡಲಾಗಿದೆ.
ಮೈಸೂರು ಸಿಲ್ಕ್ ಸೀರೆಗಳು ದೇಶ-ವಿದೇಶಗಳಲ್ಲಿ ಪ್ರಸಿದ್ದಿಯಾಗಿವೆ. ಮೈಸೂರು ಸಿಲ್ಕ್ ಸೀರೆಗಳಿಗೆ ಬೇಡಿಕೆಯೂ ಹೆಚ್ಚುತ್ತಿದ್ದು,ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದ್ದು. ಕೆಎಸ್‌ಐಸಿಗೆ ಮತ್ತೆ ೧೯೨ ವಿದ್ಯುತ್ ಕೈಮಗ್ಗಗಳನ್ನು ನೀಡಲಾಗಿದೆ. ಇದರಿಂದ ರೇಷ್ಮೆ ಸೀರೆ ಉತ್ಪಾದನೆಯಲ್ಲಿ ಬರೋಬ್ಬರಿ ೫೦% ಹೆಚ್ಚಳವಾಗಲಿದೆ. ಎಂದು ರೇಷ್ಮೆ ಸಚಿವ ಕೆಸಿ ನಾರಾಯಣ ಗೌಡ ತಿಳಿಸಿದ್ದಾರೆ.
ಕೆಎಸ್‌ಐಸಿಯಲ್ಲಿ ಪ್ರಸ್ತುತ ೨೪೯ ವಿದ್ಯುತ್ ಕೈಮಗ್ಗಗಳಿವೆ. ೨೪೯ ಕೈಮಗ್ಗಗಳಿಂದ ಪ್ರತಿ ತಿಂಗಳು ಸಮಾರು ೭೦ ಸಾವಿರ ಮೀಟರ್ ರೇಷ್ಮೆ ಉತ್ಪಾದನೆ ಮಾಡಲಾಗುತ್ತಿದೆ. ಈಗ ಕರ್ನಾಟಕ ರೇಷ್ಮೆ ಅಭಿವೃದ್ಧಿ ಕೇಂದ್ರಗಳಲ್ಲಿ ಹತ್ತಾರು ವರ್ಷಗಳ ಹಿಂದೆ ಖರೀದಿಸಿ ಬಳಕೆ ಮಾಡದೇ ಇಟ್ಟಿದ್ದ ೧೯೨ ವಿದ್ಯುತ್ ಕೈಮಗ್ಗಗಳನ್ನು ದುರಸ್ತಿಗೊಳಿಸಿ ಅವುಗಳನ್ನು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮಕ್ಕೆ ಹಸ್ತಾರಿಸಲು ರಾಜ್ಯಸರ್ಕಾರ ಒಪ್ಪಿಗೆ ನೀಡಿ . ೧೯೨ ಕೈಮಗ್ಗಗಳನ್ನು ಮೈಸೂರು ಹಾಗೂ ಚನ್ನಪಟ್ಟಣದ ನೇಯ್ಗೆ ಘಟಕಗಳಿಗೆ ಹಂಚಿಕೆ ಮಾಡಲಾಗಿದೆ. ೧೯೨ ಮಗ್ಗಗಳನ್ನು ಹೆಚ್ಚುವರಿಯಾಗಿ ನೀಡುವುದರಿಂದ ರೇಷ್ಮೆ ಸೀರೆ ಉತ್ಪಾದನೆಯಲ್ಲಿ ಶೇ. ೫೦ ರಷ್ಟು ಹೆಚ್ಚಳವಾಗಲಿದೆ. ಪ್ರತಿ ತಿಂಗಳು ೧ ಲಕ್ಷ ಮೀಟರ್‌ಗಿಂತಲೂ ಹೆಚ್ಚು ರೇಷ್ಮೆ ಸೀರೆ ಉತ್ಪಾದನೆಯಾಗಲಿದೆ. ಎಂದು ಅವರು ಹೇಳಿದರು.
ಮೈಸೂರು ಸಿಲ್ಕ್‌ಗೆ ತುಂಬಾ ಬೇಡಿಕೆ ಇದೆ. ಹಾಗಾಗಿ ಉತ್ತಮ ಗುಣಮಟ್ಟದ ರೇಷ್ಮೆ ಸೀರೆ ಉತ್ಪಾದನೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಹೆಚ್ಚಿಸಲು ಕೆಎಸ್‌ಐಸಿಗೆ ಈಗಿರುವ ೨೪೯ ಮಗ್ಗಗಳ ಜೊತೆಗೆ ೧೯೨ ಮಗ್ಗಗಳನ್ನು ನೀಡಲಾಗುತ್ತಿದೆ. ಇದರಿಂದ ಸೀರೆಗಳ ಉತ್ಪಾದನೆಯೂ ಹೆಚ್ಚಾಗಲಿದ್ದು, ರೈತರ ರೇಷ್ಮೆಗೂಡಿಗೂ ಬೇಡಿಕೆ ಹೆಚ್ಚಾಗಲಿದೆ. ರೈತರ ಹಿತ ಕಾಯುವುದರ ಜೊತೆಗೆ ಸಂಸ್ಥೆಗೆ ಶಕ್ತಿ ತುಂಬಲು ಇದು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.