
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.15: ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯಿಂದ ಮೈಸೂರು ವಿಭಾಗದ ರೈಲ್ವೆ ಮ್ಯಾನೇಜರ್ ಶ್ರೀಮತಿ ಶಿಲ್ಪಿ ಅಗರ್ವಾಲ್ ಮೈಸೂರಿನಲ್ಲಿ ಭೇಟಿ ಮಾಡಿ ರೈಲ್ವೆ ಬೇಡಿಕೆಗಳ ಪತ್ರ ನೀಡಿ ಅವರೊಂದಿಗೆ ವಿವರವಾಗಿ ಚರ್ಚಿಸಲಾಯಿತು ಎಂದು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆಎಂ ಮಹೇಶ್ವರ ಸ್ವಾಮಿ ತಿಳಿಸಿದರು.
ಮುಂಬೈ ಗದಗ್ ಹೊಸಪೇಟೆಯ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಹಾಗೂ ಸೋಲಾಪುರ ಗದಗ ಹೊಸಪೇಟೆಯ ರೈಲುಗಳನ್ನು ಮೈಸೂರಿನವರೆಗೆ ವಿಸ್ತರಣೆ ಮಾಡಿದಲ್ಲಿ ಈ ಎರಡು ರೈಲುಗಳು ಸಂಪೂರ್ಣ ಕರ್ನಾಟಕದ ಮಧ್ಯಭಾಗದಲ್ಲಿ ಸಂಚರಿಸುತ್ತವೆ ಎಂದು ತಿಳಿಸಲಾಯಿತು
ಮೈಸೂರು ಹೊಳೆನರಸೀಪುರ ಹಾಸನ ಅರಸೀಕೆರೆ ಕಡೂರು ಬೀರೂರು ಚಿಕ್ಕಜಾಜೂರು, ಚಿತ್ರದುರ್ಗ ರಾಯದುರ್ಗ ಬಳ್ಳಾರಿ ತೋರಣಗಲ್ಲು ಹೊಸಪೇಟೆ, ಕೊಪ್ಪಳ ಗದಗ ಬಾಗಲಕೋಟೆ ಬಿಜಾಪುರದ ಜನತೆಗೆ ಮುಂಬೈ ಹಾಗೂ ಮೈಸೂರಿನ ಕಡೆ ಪ್ರಯಾಣಿಕರು ಹೋಗಿಬರಲು ಈ ರೈಲುಗಳ ಸೇವೆ ದೊರೆಯುವುದಾಗಿ ರೈಲ್ವೆಯ ಡಿ ಆರ್ ಎಂ ರವರಿಗೆ ಮನವರಿಕೆ ಮಾಡಿಕೊಡಲಾಯಿತು
ಗುಂತಕಲ್ ಚಿಕ್ಕಜಾಜೂರು ರೈಲನ್ನು ಚಿಕ್ಕಮಗಳೂರು ವರೆಗೆ ವಿಸ್ತರಿಸುವಂತೆ ಕೂಡ ಅವರಲ್ಲಿ ಕೋರಲಾಯಿತು
ಮೈಸೂರು ನಿಂದ ಆರಂಭವಾಗುವ ವಾರಣಾಸಿ ಬೈ ವೀಕ್ಲಿ ಎಕ್ಸ್ಪ್ರೆಸ್ ರೈಲಿಗೆ ಕೂಡಲೇ ಪ್ಯಾಂಟ್ರಿ ಸೌಲಭ್ಯ ಒದಗಿಸುವಂತೆ ಹಾಗೂ ಈ ರೈಲಿನಲ್ಲಿ ಸ್ಲೀಪರ್ ಭೋಗಿಗಳಲ್ಲಿ ಅನ್ಯ ಜನರ ನುಗ್ಗದಂತೆ ತಡೆಯುವಂತೆ ಕೂಡ ಕೋರಲಾಯಿತು
ಈ ಎಲ್ಲ ಬೇಡಿಕೆಗಳು ಮೈಸೂರು ಡಿ ಆರ್ ಎಂ ರವರ ವ್ಯಾಪ್ತಿಯಲ್ಲಿ ಬರುವುದರಿಂದ ತಕ್ಷಣ ಕ್ರಮ ವಹಿಸಲು ತಮಗೆ ಪತ್ರ ನೀಡಲಾಗಿದೆ ಎಂದು ತಿಳಿಸಲಾಯಿತು
ರೈಲ್ವೆಯ ಡಿ ಆರ್ ಎಂ ರವರು ಎಲ್ಲ ಬೇಡಿಕೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.