ಮೈಸೂರು ರಸ್ತೆ ಅಪಘಾತ; ಮೃತರ ಕುಟುಂಬಗಳಿಗೆ ಚೆಕ್ ವಿತರಿಸಿದ ಸಚಿವ ನಾಗೇಂದ್ರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.05: ಮೈಸೂರು ಸಮೀಪ ಟಿ.ನರಸೀಪುರದ ಕುರುಬೂರು ಬಳಿ (ಮೇ.29) ಭೀಕರ ರಸ್ತೆ ಅಪಘಾತದಲ್ಲಿ ಮೃತರಾಗಿದ್ದ ಬಳ್ಳಾರಿ ಜಿಲ್ಲೆ ಸಂಗನಕಲ್ಲು ಗ್ರಾಮದ ಮೃತರ ಕುಟುಂಬಸ್ಥರಿಗೆ ಭಾನುವಾರ ಸಂಜೆ ಸಚಿವ ಬಿ.ನಾಗೇಂದ್ರ ಅವರು ಪರಿಹಾರದ ಚೆಕ್ ನಿನ್ನೆ ಸಂಜೆ  ವಿತರಣೆ ಮಾಡಿದರು.
ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದಂತೆ ಸಿಎಂ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ.ಗಳ ಚೆಕ್ ವಿತರಿಸಲಾಯಿತು.
ಅಪಘಾತದಲ್ಲಿ ಒಟ್ಟು ಈವರೆಗೆ 11 ಜನ ಮೃತರಾಗಿದ್ದು, ಮೃತರ ಪೈಕಿ ಸಂಗನಕಲ್ಲು ಗ್ರಾಮದ 10 ಜನರು ಮೃತರಾಗಿದ್ದರು. ಮೃತರಾದವರಿಗೆ ಸದ್ಯ 7 ಜನರಿಗೆ ಮಾತ್ರ ಚೆಕ್ ವಿತರಣೆ ಮಾಡಲಾಗಿದ್ದು, ಇನ್ನುಳಿದ ಮೂರು ಜನರಿಗೆ ಶೀಘ್ರ ಚೆಕ್ ವಿತರಿಸಲಾಗುವುದು.
ಕಳೆದ ತಿಂಗಳು 29ನೇ ತಾರೀಕು ದೇವರ ದರ್ಶನಕ್ಕೆಂದು ಸಂಗನಕಲ್ಲು ಗ್ರಾಮದ ಮೂರು ಕುಟುಂಬಗಳ 13 ಜನರು ಪ್ರವಾಸ ತೆರಳಿದ್ದರು. ಮೈಸೂರಿಗೆ ಹೋಗಿ ತಾಯಿಯ ದರ್ಶನ ಪಡೆದು ವಾಪಸ್ ಬರುವಾಗ ದುರ್ದೈವವಶಾತ್ ಅಪಘಾತ ಆಗಿ ಈವರೆಗೆ 11 ಜನ ಮೃತಪಟ್ಟಿದ್ದಾರೆ. ಸ್ಥಳದಲ್ಲೇ 10 ಜನರು ಮೃತರಾಗಿದ್ದರು, ಈ ಪೈಕಿ 9 ಜನ ಸಂಗನಕಲ್ಲು ಗ್ರಾಮದವರಾಗಿದ್ದರು. ಗಾಯಾಳುಗಳ ಪೈಕಿ ಸಂದೀಪ್ ಎಂಬುವವರನ್ನು ಬದುಕುಳಿಸಲು ಮೈಸೂರಿನ ಕೆ.ಆರ್.ಆಸ್ಪತ್ರೆಯ ವೈದ್ಯರು ಶಕ್ತಿ ಮೀರಿ ಪ್ರಯತ್ನ ಪಟ್ಟರು ಆದರೆ ಚಿಕಿತ್ಸೆ ಫಲಕಾರಿ ಆಗದೆ ಮೊನ್ನೆ ಮೃತರಾಗಿದ್ದಾರೆ.  ಘಟನೆ ನಡೆಯುತ್ತಿದ್ದಂತೆ ಸಿಎಂ ಅವರ ಸೂಚನೆಯಂತೆ ನಾನು ಮೈಸೂರಿನ ಆಸ್ಪತ್ರೆ ಹಾಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದೆ. ಇಂತಹ ಘಟನೆ ಯಾರ ಜೀವನದಲ್ಲೂ ನಡೆಯಬಾರದು ಎಂದು ಹೇಳಿದ ಸಚಿವ ನಾಗೇಂದ್ರ, ಅಲ್ಲಿ ಹೋಗಿ ನಾನು ನೋಡಿದಾಗ ಹೃದಯವಿದ್ರಾವಕ ದೃಶ್ಯ ಇತ್ತು. ಗಾಯಾಳು ಸಂದೀಪ್ ಉಳಿಯಬಹುದೆಂಬ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ ಎಂದರು.
ಸಿಎಂ ಅವರು ಸಿಎಂ ಪರಿಹಾರ ನಿಧಿಯಿಂದ ತಲಾ ಒಬ್ಬರಿಗೆ 2 ಲಕ್ಷ ರೂ. ಚೆಕ್ ನೀಡುವಂತೆ ಘೋಷಣೆ ಮಾಡಿದ್ದರು. ಜೊತೆಗೆ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳುವಂತೆ ಸಿಎಂ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ನಾನು ಇಂದು ಸಂಗನಕಲ್ಲು ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ್ದೇನೆ. ಸಿಎಂ ಪರಿಹಾರ ನಿಧಿಯ ಚೆಕ್ ವಿತರಿಸಿದ್ದೇನೆ ಎಂದರು.
ಕೇಂದ್ರ ಸರ್ಕಾರ ಕೂಡ ಪರಿಹಾರ ನೀಡಲಿ ಎಂದು ನಾನು ಕೂಡ ಒತ್ತಾಯ ಮಾಡುತ್ತೇನೆ, ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯುವೆ ಎಂದು ಹೇಳಿದ ಅವರು ಸರ್ಕಾರದಿಂದ ಉದ್ಯೋಗ ಹಾಗೂ ಇತರ ನೆರವು ದೊರಕಿಸಿ ಕೊಡಲು ಪ್ರಯತ್ನಿಸುವೆ ಎಂದರು.