ಮೈಸೂರು ಮೆಡಿಕಲ್ ಕಾಲೇಜು ಹಾಸ್ಟೆಲ್‌ಗೆ ಕಾಯಕಲ್ಪ

ಮೈಸೂರು, ನ. ೯- ಶಿಥಿಲಗೊಂಡಿರುವ ಮೈಸೂರು ಮೆಡಿಕಲ್ ಕಾಲೇಜು ಕಟ್ಟಡವನ್ನು ಪರಿಶೀಲಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸಮಸ್ಯೆಯನ್ನು ಶೀಘ್ರ ಪರಿಹರಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.
ಇಂದು ಮೆಡಿಕಲ್ ಕಾಲೇಜು ಹಾಸ್ಟೆಲ್ ಗೆ ಭೇಟಿ ನೀಡಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ವೇಳೆ ಮಾತನಾಡಿದ ಅವರು ಮಳೆ ಬಂದರೆ ಕಟ್ಟಡದಲ್ಲಿ ಸೋರುತ್ತಿದ್ದು, ಈ ಕಟ್ಟಡದಲ್ಲಿ ೪೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ ಎಂದು ಹೇಳಿದರು.
ಈ ಹಿಂದೆ ೨೦೧೮ರಲ್ಲಿ ಈ ಕಾಮಗಾರಿಗೆ ೭ ಕೋಟಿ ರೂ. ಅಂದಾಜು ಮಾಡಲಾಗಿತ್ತು, ಈಗ ಮತ್ತೇ ೫ ರಿಂದ ೧೦ ರಷ್ಟು ಹೆಚ್ಚಿನ ಹಣ ಬೇಕಾಗಬಹುದು. ಶಿಥಿಲಗೊಂಡಿರುವ ವಿದ್ಯಾರ್ಥಿಗಳು ಉಳಿದುಕೊಳ್ಳಲು ಸಾಧ್ಯವಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸುತ್ತೇವೆ ಎಂದರು.
ಆರೋಗ್ಯ ಸಚಿವ ಡಾ.ಸುಧಾಕರ್ ಜೊತೆ ಚರ್ಚಿಸಿ, ಸದ್ಯದಲ್ಲೇ ಕ್ರಮ ಕೈಗೊಳ್ಳುವುದಾಗಿ ಸೋಮಶೇಖರ್ ತಿಳಿಸಿದರು.
ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ವಿವಿಧ ಆಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ರಸ್ತೆ ಆಭಿವೃದ್ಧಿ ಕಾಮಗಾರಿಗೆ, ಸರಸ್ಪತಿಪುರಂ ಹುಡ್ಕೋ ಬಡಾವಣೆ ಬಿಸಿಲು ಮಾರಮ್ಮನ ದೇವಸ್ಥಾನ ರಸ್ತೆ ಹಾಗೂ ಪಂಪಾಪತಿ ರಸ್ತೆಯ ಮರು ಡಾಂಬರೀಕರಣ ಸೇರಿದಂತೆ ಒಂದು ಕೋಟಿ ರೂ. ವೆಚ್ಚದ ಕಾಮಗಾರಿಗಳು ಸೇರಿವೆ.