ಮೈಸೂರು ಮೃಗಾಲಯಕ್ಕೆ ತೆರಳಿದ್ದ ಅಭಿಮನ್ಯು

ಮೈಸೂರು, ಅ.27 :- ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯನ್ನು ಯಶಸ್ವಿಗೊಳಿಸಿದ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವನ್ನು ಇದೀಗ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಕರೆದೊಯ್ಯಲಾಗಿದೆ.
ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡು ದಣಿದಿದ್ದ ಗಜನಾಯಕ ಅಭಿಮನ್ಯು ಮತ್ತು ಗೋಪಿಯನ್ನು ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ದಿಢೀರನೆ ಶಿಫ್ಟ್ ಮಾಡಲಾಗಿತ್ತು. ಜಂಬೂ ಸವಾರಿ ಮೆರವಣಿಗೆ ಮುಗಿಯುತ್ತಿದ್ದಂತೆಯೇ ಅಭಿಮನ್ಯುವನ್ನು ಮೃಗಾಲಯಕ್ಕೆ ಕರೆದೊಯ್ಯಲಾಯಿತು. ಮೈಸೂರು ಮೃಗಾಲಯದಿಂದ ಹೊರಗೆ ಕಳುಹಿಸುತ್ತಿರುವ ತಾಯಿ ಮತ್ತು ಮರಿಯಾನೆಯನ್ನು ಶಿಫ್ಟ್ ಮಾಡುವ ಕಾರ್ಯಾಚರಣೆಗೆ ಅಭಿಮನ್ಯು ಮತ್ತು ಗೋಪಿಯನ್ನು ಬಳಸಿಕೊಳ್ಳಲಾಗಿತ್ತು.
ತಾಯಿ ಮತ್ತು ಮರಿಯಾನೆಯನ್ನು ಇಂದು ಬೆಳಿಗ್ಗೆ ಲಾರಿಗೆ ಹತ್ತಿಸಿದ ನಂತರ ಅಭಿಮನ್ಯು ಮತ್ತು ಗೋಪಿಯನ್ನು ಮತ್ತೆ ಅರಮನೆ ಆವರಣಕ್ಕೆ ಕರೆ ತರಲಾಯಿತು. ಕಾಡು ಪ್ರಾಣಿಗಳನ್ನು ಸೆರೆ ಹಿಡಿಯುವ ಮತ್ತು ಪಳಗಿಸುವ ತಂತ್ರಕ್ಕೆ ಅಭಿಮನ್ಯುವನ್ನು ಬಳಸಿಕೊಳ್ಳಲಿದ್ದು, ಅರಣ್ಯ ಇಲಾಖೆಯಲ್ಲಿ ಅಭಿಮನ್ಯು ಕೂಂಬಿಂಗ್ ಸ್ಪೆಶಲಿಸ್ಟ್ ಕಾರ್ಯ ನಿರ್ಹಹಿಸುತ್ತಾನೆ. ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ಹವಣೆ ಮಾಡುವುದೇ ಅಭಿಮನ್ಯುವಿನ ಸ್ಪೆಷಲ್ ಕ್ಯಾರೆಕ್ಟರ್.