ಮೈಸೂರು-ಮಂಗಳೂರಲ್ಲಿ ನಾಳೆ ಮೋದಿ ಪ್ರಚಾರ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಏ.೧೩:ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಾವು ಏರುತ್ತಿದ್ದು, ನಾಳೆ ಪ್ರಧಾನಿಮೋದಿ ಅವರು ಚುನಾವಣಾ ಪ್ರಚಾರಕ್ಕಾಗಿ ಆಗಮಿಸುತ್ತಿದ್ದು, ಮೈಸೂರು ಹಾಗೂ ಮಂಗಳೂರಿನಲ್ಲಿ ಬಿಜೆಪಿ ಪರ ಪ್ರಚಾರ ನಡೆಸುವರು.
ಪ್ರಧಾನಿ ಮೋದಿ ಅವರು ನಾಳೆ ಸಂಜೆ ೪ ಗಂಟೆಗೆ ಮೈಸೂರಿಗೆ ಆಗಮಿಸಲಿದ್ದು, ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಬಿಜೆಪಿಯ ವಿಜಯಸಂಕಲ್ಪ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಬಿಜೆಪಿ ಪರ ಪ್ರಚಾರ ನಡೆಸುವರು.
ಮೈಸೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ನಂತರ ಪ್ರಧಾನಿ ಮೋದಿ ಅವರು ಮಂಗಳೂರಿಗೆ ತೆರಳಿ ನಾಳೆ ರಾತ್ರಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಪರಮತಬೇಟೆ ನಡೆಸುವರು.
ಮಂಗಳೂರಿನ ಶ್ರೀ ನಾರಾಯಣಗುರು ವೃತ್ತದಿಂದ ನವಭಾರತ್ ವೃತ್ತದವರೆಗೆ ತೆರೆದ ವಾಹನದಲ್ಲಿ ಪ್ರಧಾನಿ ಮೋದಿ ಅವರು ರೋಡ್ ಶೋ ನಡೆಸುವರು.
ಪ್ರಧಾನಿ ಮೋದಿ ಅವರ ಈ ಪ್ರಚಾರ ಸಭೆಗಳಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ರಾಜ್ಯದ ಎಲ್ಲ ಪ್ರಮುಖ ಮುಖಂಡರು ಪಾಲ್ಗೊಳ್ಳುವರು.
ಬಿಗಿ ಭದ್ರತೆ
ಪ್ರಧಾನಿ ಮೋದಿ ಅವರು ನಾಳೆ ಮೈಸೂರು ಹಾಗೂ ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ನಡೆಸಲಿರುವ ಹಿನ್ನೆಲೆಯಲ್ಲಿ ಮೈಸೂರು ಮತ್ತು ಮಂಗಳೂರು ಎರಡೂ ಕಡೆ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದ್ದು, ಪೊಲೀಸ್ ಬಂದೋಬಸ್ತ್‌ನ್ನು ನಿಯೋಜಿಸಲಾಗಿದೆ.’