ಮೈಸೂರು ಬಳಿ ಅಪಘಾತ 9 ಶವಗಳಗೆಸಂಗನಕಲ್ಲಿನಲ್ಲಿ ಸಾಮೂಹಿಕ ಅಂತ್ಯ ಸಂಸ್ಕಾರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.30: ನಿನ್ನೆ ದಿನ ಮೈಸೂರು ಬಳಿ ಖಾಸಗಿ‌ ಬಸ್ ಹಾಗೂ ಇನೋವಾ ಕಾರು ಅಪಘಾತ ಪ್ರಕರಣದಲ್ಲಿ ಮೂವರು ಮಕ್ಕಳು ಸೇರಿದಂತೆ ಮೃತಪಟ್ಟ
9 ಜನರ  ಶವಗಳ ಅಂತ್ಯ  ಅಂತ್ಯ ಸಂಸ್ಕಾರ 
ತಾಲೂಕಿನ ಸಂಗನಕಲ್ಲು   ಗ್ರಾಮದ ವೀರಶೈವ ರುದ್ರಭೂಮಿಯಲ್ಲಿ ಇಂದು ಮಧ್ಯಾಹ್ನ  ಕಣ್ಣೀರಧಾರೆಯ ಮಧ್ಯೆ  ನಡೆಯಿತು.
ಮಂಜುನಾಥ್ (35), ಪೂರ್ಣಿಮಾ (30),  ಸಂದೀಪ್ (24), ಸುಜಾತ (40), ಕೊಟ್ರೇಶ್ (45), ಗಾಯಿತ್ರಿ (35) ಹಾಗು ಮಕ್ಕಳಾದ ಶ್ರೇಯಾ (3) ಪವನ್ (10), ಕಾರ್ತಿಕ್ (8) ಇವರ ಅಂತ್ಯಕ್ರಿಯೆ ನಡೆಸಲಾಯ್ತು. 
ಒಂದೇ ಸಮುದಾಯದ ಮತ್ತು ಒಂದೇ ಕುಟುಂಬದವರ ಶವಗಳನ್ನು ಗ್ರಾಮಕ್ಕೆ 4 ಆಂಬ್ಯುಲೆನ್ಸ್ ನಲ್ಲಿ ತರುತ್ತಿದ್ದಂತೆ ಇಡೀ ಗ್ರಾಮದಲ್ಲಿ ಆವರಿಸಿದ್ದ ಮೌನ‌ದ ಕಟ್ಟೆಯೊಡೆದು ಕಣ್ಣೀರ ಧಾರೆ ಹರಿಯಿತು. ಸರ್ಕಾರ ಘೋಷಣೆ  ಮಾಡಿದ ಪರಿಹಾರ ಸಮಾಧಾನಕ್ಕೆ ಹೊರತು ಸತ್ತವರನ್ನು ಕರೆತರಲಾಗುದು ಎಂಬ ದುಖಃದ ಮಾತುಗಳು ಕೇಳಿ ಬಂದವು.
ಇಂತಹ ಸಾವು ನಮ್ಮೂರಲ್ಲಿ ಈವರಗೆ  ನೋಡಿರಲಿಲ್ಲ. ಯಾರಿಗೂ ಈ ರೀತಿಯ ಸಾವು ಬರಬಾರದು ಎನ್ನುತ್ತಿದ್ದರು ಜನತೆ.
ಜೆಸಿಬಿಯಿಂದ ತೋಡಲಾಗಿದ್ದ ಒಂಭತ್ತು ಗುಂಡಿಯಲ್ಲಿ ಒಂದೊಂದು ಶವಗಳನ್ನು ಇಳಿಸುತ್ತಿದ್ದಂತೆ ಅಲ್ಲಿ ನೆರೆದವರ ಮನಕರಗುತ್ತಿತ್ತು.
ಮನೆ ಮುಂದೆ ಪೂಜೆ ಮಾಡಿ ನಂತರ ರುದ್ರಭೂಮಿಗೆ ತೆಗೆದುಕೊಂಡು ಹೋಗಲಾಯ್ತು.
ಇದೇ ಪ್ರಕರಣದಲ್ಲಿ ಸಾವನ್ನಪ್ಪಿದ ಡ್ರೈವರ್ ಆದಿತ್ಯ ಮೃತದೇಹ ಅವರ ಕುಟುಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಪರಿಹಾರ:
ಮೃತ ಕುಟುಂಬದ ಸಂಬಂಧಿಕರಿಗೆ ತಲಾ 2 ಲಕ್ಷ ರೂಗಳನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ಘಟನೆ ಹಿನ್ನಲೆ:
ಮೇ.27 ರಂದು ಬಳ್ಳಾರಿಯಿಂದ ಮೈಸೂರಿಗೆ ರೈಲಿನಲ್ಲಿ ತೆರಳಿ. ಅಲ್ಲಿ ಬಾಡಿಗೆ ಕಾರು ಪಡೆದು ಸುತ್ತ ಮುತ್ತ ಪ್ರವಾಸಿ ತಾಣಗಳನ್ನು ನೋಡಿಕೊಂಡು ಮಲೆ ಮಾದೇಶ್ವರನ ದರ್ಶನ‌ಪಡೆದು ನಿನ್ನೆ ಪುನಃ ರೈಲಿನಲ್ಲಿ ಬಳ್ಳಾರಿಗೆ ಬರಬೇಕಿತ್ತು.
ಇವರ ಪ್ರಾಣಕ್ಕಾಗಿ ರಸ್ತೆ ತಿರುವಿನಲ್ಲಿ ಖಾಸಗಿ ಬಸ್ ರೂಪದಲ್ಲಿ ಕಾದು ಕುಳಿತಿದ್ದ ಜವರಾಯನಿಂದಾಗಿ ಅಫಘಾತವಾಗಿ ಇವರೆಲ್ಲ ಸಾವನ್ನಪ್ಪಿದ್ದಾರೆ.
ಗಾಯ:
ಮಕ್ಕಳಾದ ಗಾಯಾಳುಗಳು   ಪುನೀತ್(6) ಪವನ್ (7) ಮತ್ತು
ಜನಾರ್ಧನ (42) ಇವರು  ಗಾಯಗೊಂಡಿದ್ದು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಚಿವರ ಸಂತಾಪ:
ಆಸ್ಪತ್ರೆಗೆ ನಿನ್ನೆ ಭೇಟಿ ನೀಡಿದ ಬಳ್ಳಾರಿ ಗ್ರಾಮೀಣ ಶಾಸಕ, ಕ್ರೀಡಾ ಸಚಿವ ಬಿ.ನಾಗೇಂದ್ರ ಗಾಯಾಳಯಗಳ ಚಿಕಿತ್ಸೆ ಬಗ್ಗೆ  ವಿಚಾರಿಸಿ. ಸಾವಿನ‌ ಬಗ್ಗೆ ಸಾಂತ್ವನ‌ ಹೇಳಿದ್ದಾರೆ. ಗಾಯಾಳುಗಳ ಚಿಕಿತ್ಸೆಗೂ ಸರ್ಕಾರ 50 ಸಾವಿರ ರೂ ಪರಿಹಾರ ನೀಡಿದೆ ಎಂದಿದ್ದಾರೆ.
ಮೃತಪಟ್ಟಿರುವ 9 ಜನರು ಒಂದೇ ಕುಟುಂಬದವರು, ಖಾನಾವಳಿಗಳಿಗೆ ರೊಟ್ಟಿ ಮಾಡಿಕೊಡುವುದು ಅವರ ವೃತ್ತಿಯಾಗಿತ್ತು,
ಮನೆಯವರೆಲ್ಲಾ ಸೇರಿ ರೊಟ್ಟಿ ಮಾರಿ ಜೀವನ ನಡೆಸುತ್ತಿದ್ದರು. ನಾನು ಈ ಕುಟುಂಬವನ್ನು ಬಹಳ ಹತ್ತಿರದಿಂದ ಬಲ್ಲೆ, ಎಲ್ಲರಿಗೂ ಅನ್ನ ಹಾಕುತ್ತಿದ್ದವರೇ ಇಂದು ದುರ್ಮರಣಕ್ಕೆ ಒಳಗಾಗಿದ್ದಾರೆ.
ಇನ್ನೂ ಮೂವರು ಸ್ಥಿತಿ ಗಂಭೀರವಾಗಿದೆ.
ಅದರಲ್ಲಿ ಒಂದು ಮಗುವಿನ ಸ್ಥಿತಿ ಮನಕಲುಕುತ್ತಿದೆ.
ಗಾಯಾಳುವಾಗಿರುವ ಮಗು ತನ್ನ ತಂದೆಯನ್ನು ಕೇಳುತ್ತಿದೆ. ಇವರ ಜೊತೆಗೆ ಇದೇ ಕುಟುಂಬದ ಇನ್ನಷ್ಟು ಜನರು ಪ್ರವಾಸಕ್ಕೆ ಬರಬೇಕಿತ್ತು.
ಅವರು ಕಾರಣಾಂತರದಿಂದ ಪ್ರವಾಸಕ್ಕೆ ಬಂದಿಲ್ಲ.
ಈ ಸಾವು ನನಗೆ ವೈಯಕ್ತಿಕವಾಗಿ ಬಹಳ ನೋವು ಕೊಟ್ಟಿದೆ ಎಂದಿದ್ದಾರೆ.
ಐದು ಲಕ್ಷ ನೀಡಿ:
ಇತ್ತ ನಿನ್ನೆ ಸಂಜೆ ಮತ್ತು ಇಂದು ಬೆಳಿಗ್ಗೆ ಮಾಜಿ ಸಚಿವ ಬಿ.ಶ್ರೀರಾಮುಲು ಸಂಗನಕಲ್ಲು  ಗ್ರಾಮಕ್ಕೆ ಭೇಟಿ ನೀಡಿ. ಮೃತರ ಕುಟುಂಬಕ್ಕೆ ಸಾಂತ್ವನ‌ ಹೇಳಿದರು.
ರಾಜ್ಯ ಸರ್ಕಾರದಿಂದ ಎರಡು ಲಕ್ಷ ಪರಿಹಾರ ನೀಡಿರೋದಕ್ಕೆ ಅಸಮಾಧಾನ ವ್ಯಕ್ತಪಡಿಸಿ.
ನಮ್ಮ ಸರ್ಕಾರದ ಅವಧಿಯಲ್ಲಿ ಐದು ಲಕ್ಷ ನೀಡುತ್ತಿದ್ದೆವು.  ಮಾನವೀಯತೆ ದೃಷ್ಟಿಯಿಂದ
 ಕುಟುಂಬದಲ್ಲಿ ಉಳಿದವರಿಗೆ ಬದಕು ಕಟ್ಟಿಕೊಳ್ಳಲು ಸಹಾಯವಾಗುವ ರೀತಿಯಲ್ಲಿ ತಲಾ ಐದು ಲಕ್ಷ ರೂ ನೀಡಬೇಕು ಎಂದು ಆಗ್ರಹಿಸಿದರು.
ಶಾಸಕರ ಸಂತಾಪ:
ಮೈಸೂರಿನ ಕೊಳ್ಳೆಗಾಲದ ಬಳಿ ನಿನ್ನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಾಲೂಕಿನ ಸಂಗನಕಲ್ಲು ಗ್ರಾಮದ ಜನರು ಮೃತರಾಗಿರುವ ಸುದ್ದಿ ತತಮಗೆ  ಆಘಾತ ತಂದಿದೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಸಂತಾಪ‌ ಸಂದೇಶದಲ್ಲಿ  ಹೇಳಿದ್ದಾರೆ.
ಮೃತರ ನೋವಿನಲ್ಲಿ ನಾನೂ ಭಾಗಿಯಾಗಿರುವೆ. ಕುಟುಂಬಸ್ಥರಿಗೆ ಈ ಆಘಾತ, ನೋವು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುವುದಾಗಿ ಹೇಳಿದ್ದಾರೆ.