ಮೈಸೂರು ನಗರಿ ಪ್ರವೇಶಕ್ಕೆ ನೆಗಿಟಿವ್ ರಿಪೋರ್ಟ್ ಕಡ್ಡಾಯ

ಸಿನಿಮಾ ವೀಕ್ಷಣೆ, ಪ್ರವಾಸಿ ತಾಣಗಳಿಗೂ ಈ ನಿಯಮ ಅನ್ವಯ: ಡಿಸಿ
ಮೈಸೂರು:ಏ:08: ಮೈಸೂರಿನಲ್ಲಿ ಕೊರೊನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ತಿಂಗಳ 10-20ರ ವರಗೆ ವಿಶೇಷ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಮೈಸೂರಿಗೆ ಬರುವವರು ಕೋವಿಡ್ ನೆಗಿಟಿವ್ ರಿಪೋರ್ಟ್ ಕಡ್ಡಾಯವಾಗಿ ತೋರಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ ಸೋಂಕು ನಿಯಂತ್ರಿಸುವ ಹಿನ್ನಲೆ 10 ದಿನಗಳ ಕಾಲ ಹೊಸ ಮಾರ್ಗಸೂಚಿ ತರಲು ಮುಂದಾಗಿದ್ದು, ಸಾಲು ಸಾಲು ರಜೆ, ಹಬ್ಬ ಹರಿದಿನಗಳು ಹೆಚ್ಚಾಗಿ ಇರುವ ಹಿನ್ನೆಲೆ ವಿಶೇಷ ನೂತನ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ. ಮೈಸೂರಿನ ಯಾವುದೇ ಪ್ರವಾಸಿ ಕೇಂದ್ರಗಳಿಗೆ ನಿರ್ಬಂಧವಿರುವುದಿಲ್ಲ. ಆದರೆ ಪ್ರವಾಸಿ ಕೇಂದ್ರ, ಸಿನಿಮಾ ಮಂದಿರಗಳಿಗೆ ಹೋಗಬೇಕಾದರೆ ನೆಗಟಿವ್ ವರದಿ ತರಬೇಕು. ಇದು 72 ಗಂಟೆಗಳ ಮುನ್ನ ಪಡೆದದ್ದಾಗಿರಬೇಕು. ಇಂದು ನಗರದಲ್ಲಿ 300ಕ್ಕೂ ಹೆಚ್ಚು ಸೋಂಕಿನ ಪ್ರಮಾಣ ದಾಟಲಿದ್ದು, ಇದರಿಂದಾಗಿ ಈ ರೀತಿ ಮುನ್ನೆಚ್ಚರಿಕಾ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು-ಪ್ರವಾಸಿಗರು ಈ ದಿಸೆಯಲ್ಲಿ ಸಹಕರಿಸುವಂತೆ ಮನವಿ ಮಾಡಿದರು ಎಂದರು.
ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಮಾತನಾಡಿ, ಕೋವಿಡ್ ಹೆಚ್ಚಳದ ಹಿನ್ನಲೆ ನಗರದಾದ್ಯಂತ ವಿಶೇಷ ಕೋವಿಡ್ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಲಾಗಿದ್ದು, ಇದರನ್ವಯ ಡ್ರಿಂಕ್ ಅಂಡ್ ಡ್ರೈವ್ ಮೊಕದಮ್ಮೆಯನ್ನು ಕೈಬಿಡಲಾಗಿದ್ದು, ನಗರದಲ್ಲಿ ಹೊರ ಜಿಲ್ಲೆ-ರಾಜ್ಯಗಳಿಂದ ಬರುವ ಪ್ರವಾಸಿಗರ ತಪಾಸಣೆಗೆಂದು 300 ಮಂದಿ ಹೋಂ ಗಾರ್ಡ್‍ಗಳನ್ನು ನೇಮಕ ಮಾಡಲಾಗಿದೆ. ಮದುವೆ, ಸಭೆ ಸಮಾರಂಭಗಳನ್ನು ನಡೆಸುವವರು ಎಸಿಪಿರವರಿಂದ ಅನುಮತಿಯನ್ನು ಪಡೆಯಬೇಕು. ಪ್ರವಾಸಿತಾಣಗಳಿಗೆ ಬರುವವರು ಆರೋಗ್ಯ ದೃಷ್ಟಿಯಿಂದ ಕೋವಿಡ್ ಟೆಸ್ಟ್ ಮಾಡಿಸಿದರೆ ಒಳ್ಳೆದು ಮತ್ತು ಮಾರುಕಟ್ಟೆಗಳಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.