ಮೈಸೂರು ದಸರಾ : ಸಿಂಹಾಸನ ಜೋಡಣೆ

ಮೈಸೂರು, ಸೆ. ೨೦- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಕ್ಕೆ ಸಿದ್ಧತಾ ಕಾರ್ಯ ಭರದಿಂದ ಸಾಗಿದ್ದು, ರತ್ನಖಚಿತ ಸಿಂಹಾಸನ ಜೋಡಣೆಯನ್ನು ಇಂದು ನೆರವೇರಿಸಲಾಯಿತು.
ಸಿಂಹಾಸನ ಜೋಡಣೆ ಕಾರ್ಯದಿಂದ ಮೈಸೂರು ಅರಮನೆಗೆ ಮಧ್ಯಾಹ್ನ ೧ ಗಂಟೆಯವರೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ಅರಮನೆಯ ಸ್ಟ್ರಾಂಗ್ ರೂಂನಲ್ಲಿರುವ ಸಿಂಹಾಸನವನ್ನು ಹೊರತಂದು ಜೋಡಿಸಲಾಯಿತು. ಈ ಸಂದರ್ಭದಲ್ಲಿ ಪೋಲೀಸ್ ಬಿಗಿಭದ್ರತೆ ಕೈಗೊಳ್ಳಲಾಗಿತ್ತು.
ಸಿಂಹಾಸನ ಜೋಡಣೆಗೆ ಮುನ್ನ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಅರಮನೆ ಪುರೋಹಿತರು, ಗಣಪತಿಹೋಮ, ಚಾಮುಂಡಿಪೂಜೆ, ಶಾಂತಿಹೋಮ ಮಾಡಿದರು.
ನವರಾತ್ರಿ ಸಂದರ್ಭದಲ್ಲಿ ಮೈಸೂರು ಮಹಾರಾಜ ಸಿಂಹಾಸನಾರೂಢರಾಗಿ ಖಾಸಗಿ ದರ್ಬಾರ್ ನಡೆಸುವುದು ಮೊದಲಿನಿಂದ ನಡೆದುಬಂದಿರುವ ಸಂಪ್ರದಾಯವಾಗಿದೆ. ಅಂತೆಯೇ ಸೆ. ೨೬ ರಂದು ಖಾಸಗಿ ದರ್ಬಾರ್ ನಡೆಯಲಿದೆ.