ಮೈಸೂರು ದಸರಾ ಗಜಪಡೆ ಅರ್ಜುನ ಬಲಶಾಲಿ

ಮೈಸೂರು, ಸೆ. ೯- ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಎರಡನೇ ತಂಡದ ಆನೆಗಳಿಗೆ ಇಂದು ತೂಕಹಾಕುವ ಪ್ರಕ್ರಿಯೆ ನಡೆದಿದ್ದು, ಮೊದಲ ತಂಡದಲ್ಲಿ ಆಗಮಿಸಿದ ಆನೆಗಳ ತೂಕವು ನಡೆಯಿತು.


ದಸರಾ ಗಜಪಡೆಗಳ ತೂಕ ಪ್ರಕ್ರಿಯೆಯು ಮೈಸೂರಿನ ಧನ್ವಂತ್ರಿಯಲ್ಲಿನ ವೇ ಬ್ರಿಡ್ಜ್‌ನಲ್ಲಿ ಅಂದರೆ ಲಾರಿಗಳಿಗೆ ತೂಕ ಹಾಕುವ ವೇವ್‌ಬ್ರಿಡ್ಜ್‌ನಲ್ಲಿ ನಡೆದಿದ್ದು, ಈ ಬಾರಿಯೂ ಅರ್ಜನನೇ ಬಲಶಾಲಿ ಅಂತ ನಿರೂಪಿಸಿದ್ದಾನೆ. ತೂಕದಲ್ಲಿ ಅರ್ಜುನನೇ ಬಲಶಾಲಿಯಾಗಿದ್ದು, ಬರೋಬ್ಬರಿ ೫೮೮೫ ಕೆ.ಜಿ ತೂಕ ಹೊಂದಿದ್ದಾನೆ. ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ೫೦೦೦, ಚೈತ್ರ ೩೨೩೫, ಭೀಮಾ ೪೩೪೫, ಗೋಪಾಲಸ್ವಾಮಿ ೫೪೬೦, ಮಹೇಂದ್ರ ೪೪೫೦, ವಿಜಯ ೨೭೬೦, ಗೋಪಿ ೪೬೭೦, ಧನಂಜಯ ೪೮೯೦, ಶ್ರೀರಾಮ ೪೪೭೫, ಲಕ್ಷ್ಮಿ ೩೧೫೦, ಸುಗ್ರೀವ ೪೭೮೫, ಕಾವೇರಿ ೩೨೪೫ ಇನ್ನೂ ಈ ಗಜಪಡೆಯಲ್ಲಿ ಕಿರಿಯವನಾಗಿರುವ ಪಾರ್ಥಸಾರಥಿ ೩೪೪೫ ಕೆಜಿ ತೂಕವನ್ನು ಹೊಂದಿದ್ದಾನೆ.
ಡಿಸಿಎಫ್ ಡಾ.ವಿ. ಕರಿಕಾಳನ್ ಮಾತನಾಡಿ, ಈ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಮೊದಲು ಮತ್ತು ಎರಡನೇ ತಂಡದ ಆನೆಗಳು ಒಟ್ಟು ಸೇರಿ ೧೪ ಆನೆಗಳನ್ನು ನಾವು ತೂಕ ಮಾಡಿದ್ದೇವೆ. ಎರಡನೇ ತಂಡದ ಎಲ್ಲ ಗಂಡಾನೆಗಳೂ ೪೦೦೦ ದಿಂದ ೪೬೦೦ ಸಾವಿರ ಕೆಜಿವರೆಗೂ ಇದ್ದು, ಕಿರಿಯ ವಯಸ್ಸಿನ ಆನೆಯಾಗಿರುವ ಪಾರ್ಥಸಾರಥಿ ಆನೆ ೩೪೪೫ ತೂಕ ಹೊಂದಿದೆ, ಮೊದಲನೇ ತಂಡದ ಎಲ್ಲ ಆನೆಗಳ ತೂಕದಲ್ಲಿ ಹೆಚ್ಚಾಗಿದ್ದು, ನಮ್ಮ ತಾಲೀಮುಗಳಿಗೂ ಕೂಡ ತುಂಬಾ ಚೆನ್ನಾಗಿ ಸಹಕರಿಸುತ್ತಿವೆ ಎಂದು ತಿಳಿಸಿದರು.
ಈ ದಿನ ಮೊದಲನೇ ಬಾರಿಗೆ ಎಲ್ಲ ೧೪ ಆನೆಗಳನ್ನು ತೂಕ ಮಾಡುವ ಸಲುವಾಗಿ ಅರಮನೆಯಿಂದ ಹೊರ ಕರೆತಂದಿದ್ದು, ಶ್ರೀರಾಮ ಮತ್ತು ಪಾರ್ಥಸಾರಥಿ ಆನೆಗಳು ಮೊದಲನೇ ತಂಡದ ಆನೆಗಳ ಜೊತೆ ಸೇರಿ ನಿನ್ನೆಯಿಂದಲೇ ತಾಲೀಮಿನಲ್ಲಿ ಭಾಗವಹಿಸಿವೆ. ಸೆ. ೧೨ ರಿಂದ ಎಲ್ಲ ಆನೆಗಳು ತಾಲೀಮಿನಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು.