ಮೈಸೂರು:ಅ.12;ನಮ್ಮ ಸಂಸ್ಕೃತಿ ಮತ್ತು ಪರಂಪರೆಗಳ ವೈಭವದ ಸಂಕೇತ ಈ ನಮ್ಮ ಮೈಸೂರು ದಸರಾ ದೊಡ್ಡ ಹಬ್ಬವಾಗಿದೆ, ನಾಡಹಬ್ಬ ದಸರಾ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ದಸರಾ ಕ್ರೀಡಾಕೂಟಕ್ಕೆ ವಿಶೇಷ ಗೌರವ ದೊರೆಯುತ್ತಿದೆ ಎಂದು ಕ್ರೀಡಾ ಸಚಿವ ಬಿ.ನಾಗೇಂದ್ರ ತಿಳಿಸಿದರು
ಬುಧವಾರ ಮೈಸೂರು ನಗರದ ಚಾಮುಂಡಿ ವಿಹಾರದ ಕ್ರೀಡಾಂಗಣದಲ್ಲಿ ನಾಡಹಬ್ಬ ಮೈಸೂರು ದಸರಾ ಅಂಗವಾಗಿ ನಡೆದ ರಾಜ್ಯಮಟ್ಟದ ದಸರಾ ಕ್ರೀಡಾಕೂಟ ಮತ್ತು ಸಿಎಂ ಕಪ್ 2023 ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. 10 ದಿನಗಳ ಕಾಲ ಹಮ್ಮಿಕೊಂಡಿರುವ ಕ್ರೀಡಾಕೂಟಕ್ಕೆ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು ಆರು ಸಾವಿರಕ್ಕೂ ಹೆಚ್ಚು ಕ್ರೀಡಾಪಟು ಪಾಲ್ಗೊಂಡು 35 ವೈವಿಧ್ಯಮಯ ಕ್ರೀಡೆಗಳಲ್ಲಿ ಪಾಲ್ಗೊಂಡು ವಿಜೇತರಾಗಿ ನಗದು ಬಹುಮಾನ ಪಡೆಯುವುದು ದಸರಾ ಕ್ರೀಡಾಕೂಟದ ಪ್ರಮುಖ ಆಕರ್ಷಣೆ ಆಗಿದೆ.ಸದೃಢ ದೇಹ ಸದೃಢ ಮನಸ್ಸನ್ನು ಹೊಂದಿರುತ್ತದೆ ಎಂಬ ವಿವೇಕವಾಣಿಯಂತೆ ಯುವಜನರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕ್ರೀಡೆಗಳು ನಮ್ಮ ನಾಡಿನ ಸರ್ವಾಗೀಣ ಭವಿಷ್ಯವನ್ನು ರೂಪಿಸುವಲ್ಲಿ ಹಾಗೂ ಸದೃಢ ಮತ್ತು ಸಶಕ್ತ ರಾಷ್ಟ್ರವನ್ನು ನಿರ್ಮಿಸುವಲ್ಲಿ ಯುವ ಜನರನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸುತ್ತದೆಂದರು.
ತೊಂಬತ್ತರ ದಶಕದಲ್ಲಿ ಆರಂಭವಾದ ರಾಜ್ಯಮಟ್ಟದ ದಸರಾ ಕ್ರೀಡಾಕೂಟವು ಕ್ರಮೇಣವಾಗಿ ವಿಕಾಸವಾಗುತ್ತ ಇಂದು ಇಡೀ ದೇಶಕ್ಕೆ ಮಾದರಿ ಮೈಸೂರು ದಸರಾ ಕ್ರೀಡಾಕೂಟವಾಗಿದೆ. ಇತ್ತೀಚೆಗೆ ನಡೆದ ಚೀನಾದಲ್ಲಿ ನಡೆದ ಏಷ್ಯಾನ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಸಾಧನೆ ವಿಶೇಷವಾಗಿದ್ದು, ಕರ್ನಾಟಕದ ರಾಜೇಶ್ವರಿ ಗಾಯಕವಾಡ, ರೋಹನ್ ಬೋಪಣ್ಣ, ದಿವ್ಯಾ, ಆದಿತಿ ಅಶೋಕ್, ಮಿಥುನ್ ಮಂಜುನಾಥ್, ಸಾಯಿ ಪ್ರತೀಕ್ ಇನ್ನಿತರ ಕ್ರೀಡಾಪಟು ಪಡೆದ ಪದಕಗಳು ನಮ್ಮೆಲ್ಲರಿಗೆ ಸ್ಫೂರ್ತಿಯ ಚಿಲುಮೆಯಾಗಿದೆ ರಾಜ್ಯದ ಕ್ರೀಡಾಪಟುಗಳ ನಮ್ಮ ಸರ್ಕಾರ ಸದಾ ಜೊತೆಗಿದ್ದು ಸಹಕಾರ ನೀಡುತ್ತೆ ಎಂದರು.
ಕ್ರೀಡಾಕೂಟಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ. ಗೋವಿಂದರಾಜ್, ಶಾಸಕರಾದ ತನ್ವಿರ್ ಸೇಠ್, ಹರೀಶ್ ಗೌಡ , ದರ್ಶನ್ ದೃವನಾರಾಯಣ್ ಮೊದಲಾದವರು ಇದ್ದರು.