ಮೈಸೂರು ದಸರಾ ಅದ್ಧೂರಿ ಆಚರಣೆ

ಮೈಸೂರು,ಜು.೨೦- ಈ ಬಾರಿಯ ದಸರಾವನ್ನು ಅತ್ಯಂತ ಸಾಂಪ್ರದಾಯಿಕವಾಗಿ ಹಾಗೂ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಮೈಸೂರಿನ ಚಾಮುಂಡಿ ಬೆಟ್ಟದಲ್ಲಿಂದು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ದಸರಾವನ್ನು ಅದ್ಧೂರಿಯಾಗಿ ಆಚರಿಸುವ ಸಂಬಂಧ ನಿನ್ನೆ ವಿಧಾನಸೌಧದಲ್ಲಿ ಎಲ್ಲ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿದ್ದೇನೆ. ಅತ್ಯಂತ ಸಾಂಪ್ರದಾಯಿಕವಾಗಿ ಹಾಗೂ ಹೆಚ್ಚು ಆಕರ್ಷಣೀಯವಾಗಿ ಈ ಬಾರಿ ದಸರಾವನ್ನು ಆಚರಿಸಲಾಗುವುದು ಎಂದರು.
ಕೋವಿಡ್ ಕಾರಣದಿಂದ ಕಳೆದೆರೆಡು ವರ್ಷಗಳಿಂದ ದಸರಾವನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಗಜಪಯಣ ಸೇರಿದಂತೆ ಎಲ್ಲ ರೀತಿಯಲ್ಲಿ ಅದ್ಧೂರಿ ದಸರಾ ನಡೆಯುತ್ತದೆ ಎಂದರು.ಈ ಬಾರಿಯ ದಸರಾಗೆ ಹೆಚ್ಚು ಜನರನ್ನು ಆಕರ್ಷಿಸಲು ಇನ್ನೊಂದು ವಾರದಲ್ಲೇ ದಸರಾ ವೆಬ್‌ಸೈಟ್‌ಗೂ ಚಾಲನೆ ನೀಡಲಾಗುವುದು. ದಸರಾ ವಸ್ತುಪ್ರದರ್ಶನವನ್ನು ಮತ್ತಷ್ಟು ಆಕರ್ಷಣೀಯಗೊಳಿಸಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಮೈಸೂರು ಪ್ರವಾಸೋದ್ಯಮ ಕೇಂದ್ರ ಸ್ಥಾಪನೆಯ ಆದೇಶವನ್ನು ಹೊರಡಿಸುವುದಾಗಿ ಅವರು ಹೇಳಿದರು.
ದಸರಾ ಉದ್ಘಾಟನೆಗೆ ಯಾರನ್ನು ಕರೆಯಬೇಕು ಎಂಬ ತೀರ್ಮಾನವನ್ನು ನನ್ನ ವಿವೇಚನೆಗೆ ಬಿಡಲಾಗಿದೆ. ಎಲ್ಲರೊಡನೆ ಚರ್ಚಿಸಿ ದಸರಾ ಉದ್ಘಾಟನೆಗೆ ಯಾರನ್ನು ಆಹ್ವಾನಿಸಬೇಕು ಎಂಬ ಬಗ್ಗೆ ತೀರ್ಮಾನಿಸುತ್ತೇನೆ ಎಂದರು.
ದಸರಾ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡಲಾಗುವುದು ಎಂದು ಅವರು ಹೇಳಿದರು.
ತಾಯಿ ಚಾಮುಂಡೇಶ್ವರಿಯ ವರ್ದಂತಿಯಲ್ಲಿ ತಾವೂ ಸೇರಿದಂತೆ ಇಡೀ ನಾಡಿನ ಜನತೆ ಭಕ್ತಿಭಾವದಿಂದ ಪಾಲ್ಗೊಂಡಿದ್ದಾರೆ.
ಇಡೀ ಕನ್ನಡ ನಾಡಿಗೆ ಸುಭೀಕ್ಷೆ ಕೊಡಲಿ, ಅಭಿವೃದ್ಧಿ, ಸಮೃದ್ಧಿ ಕೊಡಲಿ. ಎಲ್ಲರ ಬದುಕಿನಲ್ಲಿ ಅಭಿವೃದ್ಧಿ ನೆಮ್ಮದಿ ಆಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು.ಈ ಸಂದರ್ಭದಲ್ಲಿ ಸಚಿವರುಗಳಾದ ಎಸ್.ಟಿ ಸೋಮಶೇಖರ್, ಗೋವಿಂದ ಕಾರಜೋಳ, ಶಾಸಕರಾದ ಎಸ್.ಎ ರಾಮದಾಸ್, ನಾಗೇಂದ್ರ, ನಿರಂಜನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.