ಮೈಸೂರು ಗ್ಯಾಂಗ್ ರೇಪ್ 3 ಮಂದಿ ಸೆರೆ

ಮೈಸೂರು, ಆ. ೨೬-ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸ್ನೇಹಿತನೊಂದಿಗಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪೈಶಾಚಿಕ ಕೃತ್ಯ ನಡೆಸಿದ ಮೂವರನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಮೂಲದ ನಗರದ ಖಾಸಗಿ ಕಾಲೇಜೊಂದರಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಮೃಗಗಳಂತೆ ಎರಗಿ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಪೈಶಾಚಿಕ ಕೃತ್ಯ ನಡೆಸಿ ಪರಾರಿಯಾಗಿರುವ ಇನ್ನಿಬ್ಬರ ಪತ್ತೆಗೆ ತೀವ್ರ ಶೋಧ ನಡೆಸಲಾಗಿದ್ದು, ಆದಷ್ಟು ಶೀಘ್ರವಾಗಿ ಬಂಧಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ಆ.೨೪ ಸಂಜೆ ೭.೩೦ರ ಸುಮಾರಿನಲ್ಲಿ ಚಾಮುಂಡಿ ಬೆಟ್ಟದ ತಪ್ಪಲಿನ ನಿರ್ಜನ ಪ್ರದೇಶಕ್ಕೆ ತೆರಳಿ, ಸ್ನೇಹಿತನೊಂದಿಗೆ ಕುಳಿತಿರುವಾಗ, ಪಾನಮತ್ತರಾಗಿದ್ದ ಐದಾರು ಮಂದಿ ಗುಂಪೊಂದು ಏಕಾಏಕಿ ಯುವತಿಯನ್ನು ಹಿಡಿದುಕೊಂಡಾಗ ಪ್ರತಿರೋಧ ತೋರಿದ ಸ್ನೇಹಿತನ ಮೇಲೆ ಮೂವರು ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆ.
ಹಣಕ್ಕೆ ಡಿಮ್ಯಾಂಡ್:
ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ್ದ ಕಿರಾತಕರು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಯುವತಿಯ ವಿಡಿಯೋ ಮಾಡಿ ಮೂರು ಲಕ್ಷ ರೂ. ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಈ ವೇಳೆ ಹಣ ಕೊಡುವುದಾಗಿ ಸಂತ್ರಸ್ತೆ ಹಾಗೂ ಆತನ ಸ್ನೇಹಿತ ಹೇಳಿದ್ದರು.
ಆದರೆ ಎರಡು ಗಂಟೆಯಾದರೂ ಹಣವನ್ನು ನೀಡಲು ಸಾಧ್ಯವಾಗದಾಗ ಸಂತ್ರಸ್ತೆ ಸ್ನೇಹಿತನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಇಬ್ಬರ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.
ವಿಡಿಯೋ ಲೀಕ್ ಬೆದರಿಕೆ:
ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ ಬಳಿಕ ಪೊಲೀಸರಿಗೆ ದೂರು ಕೊಡದಂತೆ ಕಾಮುಕರು ಬೆದರಿಕೆ ಹಾಕಿದ್ದರು. ದುಷ್ಕರ್ಮಿಗಳು ಅತ್ಯಾಚಾರ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. ದೂರು ಕೊಟ್ಟರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆಯೊಡ್ಡಿದ್ದರು ಎಂದು ವರದಿಯಾಗಿದೆ.
ಬಿಯರ್ ಬಾಟಲ್:
ಪೈಶಾಚಿಕ ಕೃತ್ಯಕ್ಕೂ ಮುನ್ನ ದುಷ್ಕರ್ಮಿಗಳು ಕಂಠಪೂರ್ತಿ ಕುಡಿದಿದ್ದರು. ಸ್ಥಳದಲ್ಲಿದ್ದ ಬಿಯರ್ ಬಾಟಲ್‌ಗಳು ಕಾಮುಕರು ಪಾನಮತ್ತರಾಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ. ಕಾಮುಕರು ಕಂಠಪೂರ್ತಿ ಕುಡಿದಿದ್ದರು ಎಂದು ಸಂತ್ರಸ್ಥೆ ಮತ್ತು ಯುವಕ, ಪೊಲೀಸರಿಗೆ ವಿವರಣೆ ನೀಡಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್‌ಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದು ಮೂವರನ್ನು
ಬಂಧಿಸಿದ್ದಾರೆ.
ಪ್ರಾಣಾಪಾಯದಿಂದ ಪಾರು:
ಪ್ರಕರಣದಲ್ಲಿ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ಥೆ ಹಾಗೂ ಆಕೆಯ ಸ್ನೇಹಿತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿದ್ಯಾರ್ಥಿನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ನೇಹಿತನ ಮುಖ, ತಲೆಗೆ ಗಾಯವಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗಿದ್ದು ಇಬ್ಬರೂ ಚೇತರಿಸಿಕೊಂಡಿದ್ದಾರೆ.
ಸಂತ್ರಸ್ಥೆ ಹೇಳಿಕೆ:
ಕೃತ್ಯದ ಸಂಬಂಧ ಸಂತ್ರಸ್ಥೆ ಹಾಗೂ ಆಕೆಯ ಸ್ನೇಹಿತ ಇಬ್ಬರು ಈಗಾಗಲೇ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಆರೋಪಿಗಳು ನಮ್ಮಿಬ್ಬರಿಗೂ ಅಪರಿಚಿತರು, ಸುಮಾರು ನಾಲ್ಕರಿಂದ ಐದು ಜನ ಇದ್ದರು ಎಂದು ತಿಳಿಸಿದ್ದು ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ.