ಮೈಸೂರು-ಕೊಡಗು ಕ್ಷೇತ್ರ ಜೆಡಿಎಸ್ ಪಾಲು

ಸಂಜೆವಾಣಿ ನ್ಯೂಸ್
ಮೈಸೂರು: ಜ.10:- ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಹೇಗಾದರೂ ಮಾಡಿ ಮೈಸೂರು-ಕೊಡಗು ಕ್ಷೇತ್ರವನ್ನು ಕಸಿದುಕೊಳ್ಳಲು ಪ್ಲಾನ್ ಮಾಡಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ಕುಮಾರಸ್ವಾಮಿ ಬಿಜೆಪಿಯ ಸ್ಪೋಕ್ ಪರ್ಸನ್ ಗಿಂತ ಚೆನ್ನಾಗಿ ಸ್ಪೋಕ್ ಮ್ಯಾನ್ ಆಗಿಬಿಟ್ಟಿದ್ದಾರೆ. ಮೈಸೂರು-ಕೊಡಗು ಕ್ಷೇತ್ರ ಕಸಿದುಕೊಳ್ಳಲು ಜೆಡಿಎಸ್ ಆಲೋಚನೆ ಮಾಡಿದೆ. ಬಿಜೆಪಿ ಜೊತೆ 4 ಕ್ಷೇತ್ರ ಕೇಳಿದ್ದಾರೆ. ಆದರೆ ಕೇವಲ 3 ಕ್ಷೇತ್ರ ಕೊಡಲು ಬಿಜೆಪಿ ಒಪ್ಪಿದೆ. ಹೇಗಾದರೂ ಮಾಡಿ ಮೈಸೂರು ಕ್ಷೇತ್ರವನ್ನು ಜೆಡಿಎಸ್ ಗೆ ತೆಗೆದುಕೊಳ್ಳಲು ಪ್ಲಾನ್ ಇದೆ. ಇದಕ್ಕಾಗಿ ಪ್ರತಾಪ್ ಸಿಂಹ ತಮ್ಮನ ಬಂಧನದಲ್ಲಿ ದೇವೇಗೌಡ ಕುಟುಂಬದ ಕೈವಾಡ ಎಂದು ಪತ್ರಿಕೆಯಲ್ಲಿ ಸುದ್ದಿ ಆಗಿದೆ. ಈ ಬಗ್ಗೆ ಪತ್ರಿಕೆವೊಂದರಲ್ಲಿ ವರದಿ ಆಗಿದೆ. ಪ್ರತಾಪ್ ಸಿಂಹ ಪರವಾಗಿ ಕುಮಾರಸ್ವಾಮಿ ಮಾತನಾಡುತ್ತಿರುವ ಉದ್ದೇಶವೇನು ಎಂದು ಜನ ಕೇಳುತ್ತಿದ್ದಾರೆ. ಮೈಸೂರು- ಕೊಡಗು ಕ್ಷೇತ್ರ ಬಿಟ್ಟುಕೊಡಲು ಬಿಜೆಪಿ ನಿರಾಕರಿಸಿದೆ. ಕ್ಷೇತ್ರ ಪಡೆದುಕೊಳ್ಳಲು ಹೆಚ್ ಡಿಕೆ ಹಾಗೂ ಹೆಚ್ ಡಿಡಿ ಪರಸ್ಪರ ಮಾತುಕತೆ ನಡೆಸುವ ಬಗ್ಗೆ ಚಿಂತನೆ ಮಾಡಿದ್ದಾರೆ ಎಂದು ಪತ್ರಿಕೆಯಲ್ಲಿ ವರದಿ ಬಂದಿದೆ. ಕುಮಾರಸ್ವಾಮಿ ಯಾರನ್ನ ಹೋಗಳುತ್ತಾರೋ ಅವರಿಗೆ ಕೆಡ್ಡ ತೋಡಿದ್ದಾರೆ ಎಂದರ್ಥ ಎಂದು ಲೇವಡಿ ಮಾಡಿದರು.
ಮೈಸೂರಿನಿಂದ ಮಾಜಿ ಶಾಸಕ ಸಾರಾ ಮಹೇಶ್ ಕಣಕ್ಕಿಳಿಯುತ್ತಾರೆ ಎಂಬ ಮಾಹಿತಿ ಇದೆ. ಸದ್ಯ ಜೆಡಿಎಸ್ ಸ್ಪರ್ಧಿಸುವ ನಾಲ್ಕು ಕ್ಷೇತ್ರದಲ್ಲೂ ದೇವೇಗೌಡರ ಕುಟುಂಬಸ್ಥರು ಸ್ಪರ್ಧಿಸಲಿ ಎನ್ನುವುದು ನಮ್ಮ ಆಶಯ. ಪ್ರತಾಪ್ ಸಿಂಹ ತಮ್ಮನ ಪ್ರಕರಣದಲ್ಲಿ ಸಿದ್ದರಾಮಯ್ಯ ನವರು ಬೀಟೆ ಮರಗಳನ್ನು ತಂದು ಹಾಕಿದ್ದಾರೆ ಎಂದು ಕುಮಾರಸ್ವಾಮಿ ಆರೋಪ ಮಾಡುತ್ತಾರೆ. ಮರದ ಬುಡಗಳು ಇರತ್ತದೆ ತಾನೇ. ಈ ಬೆಳವಣಿಗೆಗೆಲ್ಲ ಕುಮಾರಸ್ವಾಮಿ ಉತ್ತರ ನೀಡಲಿ ಎಂದು ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಿಂದ ಜನರಿಗೆ ಬಹಳ ಅನುಕೂಲವಾಗುತ್ತಿದೆ. ಗೃಹಲಕ್ಷ್ಮಿ, ಗೃಹ ಜ್ಯೋತಿ, ಅನ್ನ ಭಾಗ್ಯ, ಶಕ್ತಿ ಯೋಜನೆಗಳಂತಹ ಸರ್ಕಾರದ ಯೋಜನೆ ಜನರಿಗೆ ಬಹಳ ಉಪಯುಕ್ತವಾಗಿದೆ. ಕೆಎಸ್ ಆರ್ ಟಿಸಿ ಈಗ ಲಾಭದಾಯಕವಾದ ಉದ್ಯಮವಾಗಿದೆ. ಈ ಹಿಂದೆ ಶ್ರೀರಾಮುಲು ಸಾರಿಗೆ ಸಚಿವರಾಗಿದ್ದಾಗ ಕೆಎಸ್‍ಆರ್ ಟಿಸಿ ನಷ್ಟದ ಹಾದಿಯಲ್ಲಿತ್ತು. ಈಗಿನ ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ಅವರು ಕೆಎಸ್‍ಆರ್ಟಿಸಿ ನಿಗಮವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ. ಅದೇ ರೀತಿ ಎಲ್ಲಾ ಸಚಿವರು ಉತ್ತಮವಾದ ಕೆಲಸಗಳನ್ನ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ 24×7 ಕೆಲಸವನ್ನ ಮಾಡುತ್ತಿದೆ. ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸ ಜನಪ್ರಿಯತೆ ನೋಡಿ ತಡೆದುಕೊಳ್ಳಲಾಗದೇ ವಿಪಕ್ಷಗಳ ನಾಯಕರು ಆಧಾರ ರಹಿತವಾದ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರತಾಪ್ ಸಿಂಹ ನ್ಯಾಷನಲ್ ಲೀಡರಾ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಯಿಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನಿಜವಾಗಿಯೂ ಸತ್ಯವಾಗಿದೆ. ಪ್ರತಾಪ್ ಸಿಂಹ ಏನು ರಾಷ್ಟ್ರ ಮಟ್ಟದ ನಾಯಕನಲ್ಲ. ಕೇವಲ ಸಂದಸರಷ್ಟೆ. ಅವರಿಗೆ ಮೈಸೂರು ಬಿಟ್ಟರೆ ಎಲ್ಲೂ ಅವರ ಬಗ್ಗೆ ಜನರಿಗೆ ಗೊತ್ತಿಲ್ಲ. ಒಕ್ಕಲಿಗ ಯುವಕರನ್ನ ಕಾಂಗ್ರೆಸ್ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಪ್ರತಾಪ್ ಸಿಂಹ ಮಾಡುತ್ತಿದ್ದಾರೆ ಎಂದರು.
ಡಿಕೆಶಿ ಅವರನ್ನ ಮುಗಿಸುವ ಕೆಲಸವನ್ನು ಬಿಜೆಪಿ, ಜೆಡಿಎಸ್ ಮಾಡುತ್ತಿದೆ. ಹೇಗಾದರೂ ಮಾಡಿ ಡಿಕೆ ಶಿವಕುಮಾರ್ ಅವರನ್ನು ಜೈಲಿಗೆ ಕಲಿಸಬೇಕು ಎಂಬ ದೊಡ್ಡ ಅಜೆಂಡಾವನ್ನ ಇಟ್ಟುಕೊಂಡಿದೆ. ಇದನ್ನೆಲ್ಲಾ ಎದುರಿಸುವ ಧೈರ್ಯ, ಕಾಂಗ್ರೆಸ್ ಗೆ ಇದೆ ಎಂದು ಟಾಂಗ್ ನೀಡಿದರು.
ಕೆ ಆರ್ ಎಸ್ ಜಲಾಶಯದ ಸುತ್ತಮುತ್ತಲಿನ 20 ಕಿ ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿಷೇಧ ಹೇರುವಂತೆ ಹೈಕೋರ್ಟ್ ನೀಡಿರುವ ಆದೇಶ ಸ್ವಾಗತಾರ್ಹವಾದುದು. ಮನುಷ್ಯರಂತೆಯೇ ಜಲಾಶಯಗಳಿಗೂ ಇಂತಿಷ್ಟು ವರ್ಷ ಆಯಸ್ಸು ಇರುತ್ತದೆ. ಕೆಆರ್ ಎಸ್ ಜಲಾಶಯಕ್ಕೆ ಇದೀಗ ನೂರು ವರ್ಷ ಸಮೀಪಿಸುತ್ತಿದೆ. ಕೆಆರ್ ಎಸ್ ಜಲಾಶಯದ ಆಯಸ್ಸು ಇನ್ನೂ ಸುಮಾರು ನೂರು ವರ್ಷ ಇರಬಹುದು. ಗಣಿಗಾರಿಕೆ ಮುಂದುವರಿದಿದ್ದರೇ ಜಲಾಶಯದ ಅಣೆಕಟ್ಟಿಗೆ ಅಪಾಯ ಎದುರಾಗುವ ಆತಂಕವಿತ್ತು. ಒಂದು ವೇಳೆ ಜಲಾಶಯ ಒಡೆದು ಹೋದರೆ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ ನೀರು ಪೂರೈಕೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಹೈಕೋರ್ಟ್ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಕಾರಣಕ್ಕೂ ಕೆ ಆರ್ ಎಸ್ ಜಲಾಶಯಕ್ಕೆ ಧಕ್ಕೆಯಾಗುವಂತಹ ಕಾಮಗಾರಿಗಳಿಗೆ ಅನುಮತಿ ನೀಡಬಾರದು ಎಂದು ಹೇಳಿದರು.
ನಗರಾಧ್ಯಕ್ಷ ಆರ್.ಮೂರ್ತು, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ವಕ್ತಾರ ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.