ಮೈಸೂರು-ಕುಶಾಲನಗರ ರೈಲ್ವೆಗೆ ಸಿಎಂ ಸಹಕರಿಸಲಿ: ಸಂಸದರ ಮನವಿ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.27:- ಮೈಸೂರು-ಕುಶಾಲನಗರ ರೈಲ್ವೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಕಾರ ನೀಡಬೇಕಿದೆ ಎಂದು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಹಾಗೂ ಕುಶಾಲನಗರ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ 3097 ಕೋಟಿ ರೂ. ವೆಚ್ಚದಲ್ಲಿ ವಿವರವಾದ ಯೋಜನಾ ವರದಿಯನ್ನು(ಡಿಪಿಆರ್) ಸಿದ್ಧಪಡಿಸಿ ರೈಲ್ವೆ ಬೋರ್ಡ್‍ಗೆ ಸಲ್ಲಿಸಲಾಗಿದೆ. ಈಗ ರಾಜ್ಯ ಸರ್ಕಾರ ಭೂ ಸ್ವಾಧೀನ ಮತ್ತು ನಿರ್ಮಾಣ ವೆಚ್ಚದ ಶೇ. 50 ಅನುದಾನವನ್ನು ನೀಡಬೇಕಿದೆ. ರಾಜ್ಯದ 30 ಜಿಲ್ಲೆಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಮಾತ್ರವೇ ರೈಲ್ವೆ ಸಂಪರ್ಕ ಇಲ್ಲದಂತಾಗಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಗೆ ಸಹಕಾರ ಕೊಡಬೇಕಿದೆ ಎಂದರು.
ಅಲ್ಲದೇ ಮೈಸೂರು-ಚಾಮರಾಜನಗರ ಮಾರ್ಗದ ಕಡಕೊಳದ ಸಮೀಪದಲ್ಲಿ ಒಂದೂವರೆ ಕಿಲೋ ಮೀಟರ್ ಪ್ರದೇಶದಲ್ಲಿ ವಿದ್ಯುದ್ದೀಕರಣಕ್ಕೆ ವಿಮಾನ ನಿಲ್ದಾಣದ ಪ್ರಾಧಿಕಾರದಿಂದ ಅನುಮತಿ ದೊರೆಯುತ್ತಿಲ್ಲ. ಇದಕ್ಕೆ ಪರಿಹಾರ ಕಂಡು ಹಿಡಿಯಲು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಲಾಗುವುದು ಎಂದ ಅವರು, ರೈಲ್ವೆ ಹಳಿಗಳು ಹಾದು ಹೋಗುವ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೆಳಸೇತುವೆ, ಮೇಲುತ್ಸುವೆ ನಿರ್ಮಿಸುವ ಮೂಲಕ ಸುರಕ್ಷಿತ ಪಯಣಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಆ ಮೂಲಕ ರೈಲ್ವೆ ಹಳಿ ದಾಟುವ ವೇಳೆ ಸಂಭವಿಸುವ ಅಪಘಾತಗಳನ್ನು ತಡೆಯಲು ಕ್ರಮವಹಿಸಲಾಗುತ್ತದೆ ಎಂದು ಹೇಳಿದರು.
ಇನ್ನೂ ಜನರು ರೈಲ್ವೆ ಹಳಿ ಕ್ರಾಸಿಂಗ್‍ಗಾಗಿ ಸುತ್ತಿ ಬಳಸಿ ಬರುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ 10 ವರ್ಷಗಳಿಂದ ದೇಶದ್ಯಂತ ಕೆಳ ಸೇತುವೆ ಮತ್ತು ಮೇಲ್ಸುತುವೆಗಳನ್ನು ನಿರ್ಮಾಣ ಮಾಡುತ್ತಿದ್ದು, ದಡದಹಳ್ಳಿಯ ಕೆಳ ಸೇತುವೆ ಉದ್ಘಾಟಿಸಲಾಗಿದೆ. ಅದರಂತೆಯೇ ಮೈಸೂರು ನಗರದಲ್ಲಿರುವ ಕ್ರಾಫರ್ಡ್ ಭವನದ ಪಕ್ಕದ ಕುಕ್ಕರಹಳ್ಳಿ ಕೆರೆ ರಸ್ತೆ, ಕೆ.ಆರ್.ಎಸ್ ರಸ್ತೆಯಲ್ಲಿ ಸೇತುವೆ ನಿರ್ಮಾಣಕ್ಕೆ ಅನುಮತಿ ಸಿಕ್ಕಿದ್ದು, ಸದ್ಯದಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸುತ್ತೇವೆ ಎಂದರು.
ರನ್ ವೇ ವಿಸ್ತರಣೆಗೆ 1000 ಕೋಟಿ
ನಗರದ ಮಂಡಕಳ್ಳಿ ವಿಮಾಣ ನಿಲ್ದಾಣದ ರನ್ ವೇ ವಿಸ್ತರಣೆಗೆ ಸಾವಿರ ಕೋಟಿ ಬೇಕಾಗಲಿದ್ದು, ಈ ಅನುದಾನ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಈ ಹಿಂದೆ ಬಸವರಾಜ ಬೊಮಾಯಿ ಅವರು ಸಿಎಂ ಆಗಿದ್ದ ವೇಳೆ ಭೂ ಸ್ವಾಧೀನಕ್ಕೆ 319 ಕೋಟಿ ರೂ. ಕೊಟ್ಟಿದ್ದರು, ಈಗ ಸಿದ್ದರಾಮಯ್ಯ ಅವರು 43 ಕೋಟಿ ರೂ. ಘೋಷಣೆ ಮಾಡದ್ದಾರೆ. ವಿಮಾನ ನಿಲ್ದಾಣದ ಮಾರ್ಗದಲ್ಲಿ ಹಾದು ಹೋಗಿರುವ ನೀರಾವರಿ ಇಲಾಖೆಯ ನಾಲೆಗಳು ಮತ್ತು ಸೆಸ್ಕ್, ಕೆಪಿಟಿಸಿಎಲ್ ವಿದ್ಯುತ್ ತಂತಿಗಳ ಬದಲಾವಣೆಗೆ 150 ಕೋಟಿ ರೂ. ಬೇಕಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.