ಮೈಸೂರಿನಲ್ಲಿ ಹಣವಂತರಿಗಿಂತ ಹೃದಯವಂತರೇ ಹೆಚ್ಚು

ಮೈಸೂರು,ಮೇ 31-ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಣವಂತರಿಗಿಂತ ಹೃದಯವಂತರಿದ್ದಾರೆ ಎಂದು ನಗರಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಮೆಚ್ಚುಗೆ ವ್ಯಕ್ತಪಡಿಸಿದರು.
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಬಳಗದ ವತಿಯಿಂದ ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಮೈಸೂರು ಜಿಲ್ಲಾ ವಕೀಲರಿಗೆ ದಿನ ಬಳಕೆ ದಿನಸಿ ಪದಾರ್ಥ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೋವಿಡ್ ಸಂಕಷ್ಟದ ಸಮಯದಲ್ಲಿ ಸಂಘ-ಸಂಸ್ಥೆಗಳವರು ಅಧಿಕಾರಿಗಳ ಜೊತೆಗೆ ಕೈ ಜೋ ಡಿಸಿ ಕೆಲಸ ಮಾಡುತ್ತಿರುವುದೇ ಮೈಸೂರಿನಲ್ಲಿ ಹಣವಂತರಿಗಿಂತ ಹೃದಯವಂತರಿದ್ದಾರೆ ಎಂಬುದಕ್ಕೆ ಸಾಕ್ಷಿ. ಸಂಘ-ಸಂಸ್ಥೆಗಳವರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಕೊರೊನಾ ಸಮಯದಲ್ಲಿ ನಗರಪಾಲಿಕೆ ವತಿಯಿಂದ ಹೊಸದಾಗಿ ಶುರುವಾಗಿರುವ ಕಾರ್ಯ ಕ್ರಮಗಳಾಗಿರುವ ಕೋವಿಡ್ ಮಿತ್ರ, ವಾತ್ಸಲ್ಯ, ಸಾಂತ್ವನ, ಟೆಲಿ ಕೇರ್, ಮನೆ ಮನೆ ಸಮೀಕ್ಷೆ ಇದರಲ್ಲಿ ಅಧಿಕಾರಿಗಳ ಜೊತೆಗೆ ನಾಗರಿಕ ಸಮಾಜ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಬಹಳ ದೊಡ್ಡ ಮಟ್ಟದಲ್ಲಿ ಭಾಗವಹಿಸುತ್ತಿದ್ದಾರೆ. ನಾನು ಕರೆ ಮಾಡಿ ಸಂಕಷ್ಟದಲ್ಲಿರುವವರಿಗೆ 100 ಊಟ ಬೇಕು ಅಂತ ಹೇಳಿದರೆ ಸಾಕು 5 ನಿಮಿಷದಲ್ಲಿ ತಯಾರಾಗುತ್ತೆ. ಈ ರೀತಿ ಎಲೆ ಮರೆಯಲ್ಲಿ ತುಂಬ ಮಂದಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಸಂಕಷ್ಟದ ಪರಿಸ್ಥಿತಿಯಲ್ಲಿ ವಕೀಲರ ಕೈ ಹಿಡಿಯುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡು ಅವರಿಗೆ ದಿನಸಿ ವಿತರಿಸಲಾಗುತ್ತಿದೆ. ಇದು ನನ್ನ ಸೇವೆಯಲ್ಲಿ ಮರೆಲಾರದ ಅನುಭವವಾಗುತ್ತೆ. ಇಂತಹ ಅನುಭವ ಮುಂದೆ ಆಗುವುದಿಲ್ಲ. ಸಂಘ-ಸಂಸ್ಥೆಗಳವರು ಒಂದಷ್ಟು ಹಣ ನೀಡಿ ಸುಮ್ಮನಾಗುತ್ತಿಲ್ಲ. ನಮ್ಮ ಜೊತೆ ನಿಂತು ಕೆಲಸ ಮಾಡುತ್ತಿದ್ದಾರೆ ಎಂದರು.
ಡಿಸಿಪಿ ಪ್ರಕಾಶ್ ಗೌಡ ಮಾತನಾಡಿ, ಕೊರೊನಾದಿಂದಾಗಿ ಸುಮಾರು 159 ಮಂದಿ ವಕೀಲರು ಸಾವನ್ನಪ್ಪಿದ್ದಾರೆ. ಇದು ನೋವಿನ ಸಂಗತಿ. ದಯವಿಟ್ಟು ಎಲ್ಲರೂ ಜಾಗೃತೆ ವಹಿಸಿ, ಕೊರೊನಾ ನಿಯಮಗಳನ್ನು ಪಾಲಿಸಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಒಟ್ಟು 560 ಮಂದಿಗೆ ದಿನಸಿ ಕಿಟ್ ವಿತರಿಸಲಾಯಿತು.