ಮೈಸೂರಿನಲ್ಲಿ ಮಿನಿ ಲಾಕ್‍ಡೌನ್ ಜಾರಿ!?: ಡಿಸಿ

ಮೈಸೂರು,ಮಾ.22:- ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅಗತ್ಯ ಬಿದ್ದರೆ ಮಿನಿ ಲಾಕ್ ಡೌನ್ ಮಾಡಬೇಕಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎಚ್ಚರಿಕೆ ನೀಡಿದರು.
ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯಕ್ಕೆ ಎರಡನೆ ಅಲೆ ಬಂದಿದೆ ಅಂತ ಆರೋಗ್ಯ ಸಚಿವರೇ ಘೋಷಣೆ ಮಾಡಿದ್ದಾರೆ. ಸರ್ಕಾರ ಯಾವ ಗೈಡ್‍ಲೈನ್ ಹೊರಡಿಸಿದೆ ಅದರ ಪ್ರಕಾರವೇ ನಾವು ಕ್ರಮ ಕೈಗೊಂಡಿದ್ದೇವೆ. 500 ಜನರಿಗಿಂತ ಹೆಚ್ಚಾಗಿ ಎಲ್ಲಿಯೂ ಜನ ಸೇರಬಾರದು. ಇದೇ ಕಾರಣಕ್ಕೆ ನಾವು ಎಲ್ಲಾ ಜಾತ್ರೆ, ಉತ್ಸವಗಳನ್ನು ರದ್ದು ಮಾಡಿದ್ದೇವೆ. ಜನರು ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನಂಜನಗೂಡು ಜಾತ್ರೆಗೆ 500 ಮಂದಿ ಭಾಗಿಯಾಗಲು ಅನುಮತಿ ನೀಡಿದ್ದೇವೆ. ಲಕ್ಷಾಂತರ ಜನ ಬಂದು ಜಾತ್ರೆ ಮಾಡೋಕೆ ಆಗಲ್ಲ. ಅದರ ನಂತರದ ಪರಿಸ್ಥಿತಿ ನಿಭಾಯಿಸಲು ನಮಗೂ ಕಷ್ಟ ಆಗುತ್ತೆ. ಜಾತ್ರೆಯನ್ನು ಮುಂದಿನ ವರ್ಷ ಮಾಡಬಹುದು. ಆದರೆ ಜೀವನ ಉಳಿಸಿಕೊಳ್ಳುವುದು ಮುಖ್ಯ ಆಗಿದೆ ಎಂದರು.
ಮೈಸೂರು ಅರಮನೆಯಲ್ಲಿ ಮತ್ತೆ ಆರ್‍ಟಿಪಿಸಿಆರ್ ಹಾಗೂ ಆ್ಯಂಟಿಜೆನ್ ಟೆಸ್ಟ್ ಆರಂಭಿಸುತ್ತೇವೆ. ಬಾವಲಿ ಗಡಿಯಲ್ಲಿ ಪ್ರತಿಯೊಬ್ಬರಿಗೂ ಆರ್‍ಟಿಪಿಸಿಆರ್ ಟೆಸ್ಟ್ ಕಡ್ಡಾಯವಾಗಿದೆ. ತರಕಾರಿ ವಾಹನ ಅಲ್ಲ ಯಾವ ವಾಹನಕ್ಕೂ ಟೆಸ್ಟ್ ಇಲ್ಲದೆ ಪ್ರವೇಶವಿಲ್ಲ. ನಾವು ಮತ್ತೆ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ರ್ಯಾಂಡಮ್ ಟೆಸ್ಟ್ ಮಾಡುತ್ತಿದ್ದೇವೆ. ಎಲ್ಲಿಂದ ಹರಡುತ್ತಿದೆ ಅನ್ನೋದನ್ನು ಪತ್ತೆ ಹಚ್ಚಬೇಕಿದೆ. ಅಗತ್ಯಬಿದ್ದರೆ ಎಲ್ಲಿ ಸೋಂಕು ಹೆಚ್ಚಿದೆ ಅಲ್ಲಿ ಮಿನಿ ಲಾಕ್ ಡೌನ್ ಮಾಡುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಸ್ಪಷ್ಟಪಡಿಸಿದರು.
ನಂಜನಗೂಡು ರಥೋತ್ಸವಕ್ಕೆ ಸರ್ಕಾರದ ನಿಗದಿಯಂತೆ ಸೂಚನೆ ನೀಡಲಾಗಿದೆ. ಕಳೆದ ಶಿವರಾತ್ರಿ ಹಬ್ಬ ಆಚರಣೆಯಲ್ಲಿ ನಾನೇ ಹೋಗಿದ್ದೆ ಆ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಸೇರಿದ್ದರು. ಜೀವ ಮುಖ್ಯ ಅಲ್ವಾ, ಜೀವಂತವಾಗಿದ್ದರೆ ಮುಂದಿನ ವರ್ಷವಾದರೂ ಆಚರಣೆ ಮಾಡಬಹುದು ಅಲ್ಲವೇ…? ಸೂಚನೆ ಪ್ರಕಾರ ದೇವಸ್ಥಾನದ ಒಳಗಡೆ 200ಮಂದಿಗೆ ಹಾಗೂ ದೇವಸ್ಥಾನದ ಹೊರಗಿನ ಆವರಣದಲ್ಲಿ 500ಮಂದಿಗಷ್ಟೇ ಅವಕಾಶ ನೀಡಲಾಗಿದೆ ಎಂದು ನಂಜನಗೂಡು ಜಾತ್ರೆ ಸಂಬಂಧ ಸ್ಪಷ್ಟಪಡಿಸಿದರು.