ಮೈಸೂರಿನಲ್ಲಿ ಮಳೆ ಅವಾಂತರ-ಮನೆ ಕುಸಿತ: ಐವರ ರಕ್ಷಣೆ


ಮೈಸೂರು, ನ.19:- ಸಾಂಸ್ಕೃತಿಕ ನಗರಿ ಮೈಸೂರಿನ ಜನತೆ ಎಡೆಬಿಡದೇ ಸುರಿಯುತ್ತಿರುವ ಮಳೆ ಸೃಷ್ಟಿಸುತ್ತಿರುವ ಅವಾಂತರಗಳಿಂದ ತತ್ತರಿಸಿದ್ದಾರೆ.
ನಗರದ ಮಂಡಿ ಮೊಹಲ್ಲಾದಲ್ಲಿರುವ ಮಂಡಿ ಠಾಣೆ ಎದುರು ಮರಾಠ ರಾಮಮಂದಿರ ಸಮೀಪ ಮನೆಯೊಂದು ಕುಸಿತಗೊಂಡಿದೆ.
ಭಾರೀ ಮಳೆಗೆ ಮನೆ ಕುಸಿತಗೊಂಡಿದ್ದು, ಕುಟುಂಬವೇ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಪಾಲಿಕೆಯಿಂದ ಕಟ್ಟಡ ತೆರವು ಕಾರ್ಯಾಚರಣೆ ನಡೆಯುತ್ತಿದೆ ನಡೆಯುತ್ತಿದೆ. ಮಂಡಿ ಮೊಹಲ್ಲಾದಲ್ಲಿ 5 ಜನರನ್ನು ಅಭಯ 2 ತಂಡ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಮನೆಯಲ್ಲಿ ಸಿಲುಕಿದ ಐವರನ್ನ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಮನೆ ಕುಸಿದ ಮಾಹಿತಿ ಅರಿತು ಸ್ಥಳಕ್ಕಾಗಮಿಸಿ ಕಾರ್ಯ ಪ್ರವೃತ್ತರಾಗಿರುವ ಅಗ್ನಿಶಾಮಕ ದಳದ ಸಿಬ್ಬಂದಿ, ಮನೆಯಲ್ಲಿ ಸಿಲುಕಿದ್ಧ ಮಹದೇವರಾವ್, ನಾಗರತ್ನ,ಅಕ್ಷಯ್, ಪೃಥ್ವಿ ಹಾಗೂ ವೃದ್ದೆ ನೀಲಮ್ಮ ಭಾಯ್ ರನ್ನ ರಕ್ಷಣೆ ಮಾಡಿದ್ದಾರೆ.
ಸುಮಾರು ಒಂದು ಗಂಟೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಸದ್ಯ ಅವಶೇಷಗಳಡಿಯಲ್ಲಿ ಸಿಲುಕಿದ ಐವರು ಸೇಫ್ ಆಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಹಾರ ಸೂಚಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೊಮಶೇಖರ್ ಅವರು ಜಿಲ್ಲೆಗೆ ಭೇಟಿ ನೀಡಿಲ್ಲ. ಕಳೆದ ಒಂದೂವರೆ ತಿಂಗಳಿನಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಮೈಸೂರಿನ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಧಾರಾಕಾರ ಮಳೆಯಿಂದಾಗಿ ಮನೆ, ಅಂಗಡಿಗಳಿಗೆ ನೀರು ನುಗ್ಗುತ್ತಿದ್ದು ರಸ್ತೆಗಳೆಲ್ಲಾ ಹೊಂಡ ಗುಂಡಿಗಳಾಗಿವೆ.
ಇದರಿಂದ ವಾಹನ ಸಂಚಾರಕ್ಕೆ ಸಂಚಕಾರ ಎದುರಾಗಿದ್ದು ವಾಹನ ಸವಾರರು ತಮ್ಮ ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜತೆಗೆ ಶಿಥಿಲಾವಸ್ಥೆಗೆ ತಲುಪಿದ ಅನೇಕ ಕಟ್ಟಡಗಳು ಬೀಳುವ ಆತಂಕ ಎದುರಾಗಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಹ ಮುಂಜಾಗ್ರತಾ ವಹಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಮೌನವಹಿಸಿದ್ದಾರೆಂಬ ಎಂಬ ಆರೋಪ ಕೇಳಿ ಬಂದಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಮಳೆಹಾನಿಯತ್ತ ತಿರುಗಿಯೂ ನೋಡಿಲ್ಲ.
ಇನ್ನು ಅತ್ತೂ ಕರೆದು ಮೇಯರ್ ಆದ ಬಿಜೆಪಿಯ ಸುನಂದಾ ಪಾಲನೇತ್ರ ಅವರು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಸ್ಯೆಗೆ ಸ್ಪಂದಿಸುವಲ್ಲಿ ಸ್ಥಳೀಯ ಶಾಸಕರು ನಿರ್ಲಕ್ಷ್ಯ ವಹಿಸುತ್ತಿರುವ ಆರೋಪ ಕೇಳಿ ಬಂದಿದೆ.