ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆ: ಸಂತಸದ ಸಂಗತಿ

ಮೈಸೂರು:ಮಾ:22: ಕನ್ನಡ ನಾಡಿನ ಸಾಂಸ್ಕೃತಿಕ ನಗರಿ ಎಂದು ಹೆಸರಾಗಿರುವ ಮೈಸೂರು ನಗರದಲ್ಲಿ ಅಂತರರಾಷ್ಟ್ರೀಯ ಚಿತ್ರನಗರಿಯನ್ನು ಸ್ಥಾಪಿಸುವ ಪರಿಕಲ್ಪನೆಗೆ ರಾಜ್ಯ ಸರ್ಕಾರ ಪೂರಕ ಸ್ಪಂದನೆ ನೀಡಿರುವುದು ನಮ್ಮೆಲ್ಲರಿಗೂ ಹರ್ಷದಾಯಕವಾದ ಸಂಗತಿ ಯಾಗಿದೆ ಎಂದು ಚಲನಚಿತ್ರ ನಟ ನಿರ್ಮಾಪಕ ಎಸ್ ಜಯಪ್ರಕಾಶ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕನ್ನಡ ಚಲನ ಚಿತ್ರೋದ್ಯಮದ ಚಟುವಟಿಕೆಗಳಿಗೆ ಬೆಂಗಳೂರು ನಗರ ಒಂದು ಉತ್ತಮ ವೇದಿಕೆಯಾಗಿದ್ದು ಸಿನಿಮಾ ಉದ್ದಿಮೆಯನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಬೆಳೆಸುತ್ತಾ ಬಂದಿದೆ . ಆದರೂ ಕರ್ನಾಟಕ ಸಾಂಸ್ಕೃತಿಕ ರಾಜಧಾನಿಯಾಗಿರುವ ಮೈಸೂರು ನಗರದಲ್ಲಿ ಚಿತ್ರನಗರಿ ಸ್ಥಾಪನೆಯಾಗಬೇಕು ಎಂಬುದು ನಮ್ಮೆಲ್ಲರ ಆಶಯವಾಗಿತ್ತು. ಏಕೆಂದರೆ ವರನಟ ಡಾ.ರಾಜ್‍ಕುಮಾರ್, ಸಾಹಸ ಸಿಂಹ ಡಾ.ವಿಷ್ಣುವರ್ಧನ್, ಕಲಿಯುಗದ ಕರ್ಣ ಡಾ.ಅಂಬರೀಷ್ ಸೇರಿದಂತೆ ಕನ್ನಡ ಚಿತ್ರರಂಗಕ್ಕೆ ನೂರಾರು ಸಂಖ್ಯೆಯಲ್ಲಿ ಪ್ರತಿಭಾ ವಂತ ಕಲಾವಿದರನ್ನು, ತಂತ್ರಜ್ಞರನ್ನು, ಚಿತ್ರ ಸಾಹಿತಿಗಳನ್ನು, ನಿರ್ಮಾಪಕರು, ನಿರ್ದೇಶಕರನ್ನು ಕೊಡುಗೆಯಾಗಿ ನೀಡಿರುವ ಜನ್ಮಭೂಮಿ ಈ ನಮ್ಮ ಮೈಸೂರು ಚಲನಚಿತ್ರರಂಗ ಪ್ರವೇಶಿಸಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಾಗಿರುವ ಹತ್ತು ಹಲವು ಪ್ರತಿಭಾವಂತರಿಗೆ ಜನ್ಮ ನೀಡಿದ ಪುಣ್ಯಭೂಮಿಯಾಗಿರುವ ಮೈಸೂರು ನಗರವು ಕನ್ನಡ ಮಾತ್ರವಲ್ಲದೆ ಹಲವಾರು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಭಾಷೆಗಳ ಚಲನಚಿತ್ರಗಳ ನಿರ್ಮಾಣಕ್ಕೆ ಅತ್ಯು ತ್ತಮ ತಾಣಗಳನ್ನು ಹಾಗೂ ಸೌಲಭ್ಯ , ಸವಲತ್ತುಗಳನ್ನು ನೀಡುವ ಮೂಲಕ ಸಿನಿಮಾಗಳ ನಿರ್ಮಾಣಕ್ಕೆ ಪ್ರೇರಕ ಶಕ್ತಿಯೂ ಆಗಿದೆ . ವರ್ಷವಿಡೀ ಅತ್ಯುತ್ತಮ ಹವಾಗುಣವನ್ನು ಹೊಂದಿರುವ ಮೈಸೂರು ನಗರದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 250 ಕ್ಕೂ ಹೆಚ್ಚು ಪ್ರೇಕ್ಷಣೀಯ ತಾಣಗಳಿದ್ದು ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿವೆ .
ಮೈಸೂರಿನಲ್ಲಿರುವ ಕಲಾವಿದರಿಗೆ, ಸ್ಥಳೀಯ ಯುವ ಜನತೆಗೆ , ಪ್ರತಿಭಾವಂತರಿಗೆ ಉದ್ಯೋಗಾ ವಕಾಶಗಳು ಲಭಿಸಿ ಅವರ ಕುಟುಂಬಗಳೂ ಸಹ ಏಳಿಗೆ ಹೊಂದಲು ಚಿತ್ರನಗರಿ ಯೋಜನೆ ಅತ್ಯಂತ ಸಹಕಾರಿಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಇನ್ನು ವಿಳಂಬವಾಗದಂತೆ ತಕ್ಕ ಕ್ರಮ ಗಳನ್ನು ಕೈಗೊಂಡು ಯೋಜನೆಯನ್ನು ಶೀಘ್ರವೇ ಕೈಗೆತ್ತಿಕೊಂಡು ಮುಂದುವರಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ನಟಿ ಸುಲೇಖಾ, ಮಹೇಶ್ ತಲಕಾಡ್, ಚೇತನ್, ಪರಶಿವ ಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.