ಮೈಸೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ಮೈಸೂರು,ಜು.27:- ರಾಜ್ಯಾದ್ಯಂತ ಸುರಿದ ಭಾರೀ ಮಳೆಗೆ ಕೆರೆ, ಕಟ್ಟೆ, ಜಲಾಶಯಗಳು ತುಂಬಿ ತುಳುಕುತ್ತಿವೆ. ಆದರೆ ಮೈಸೂರಿನಲ್ಲಿ ಮಾತ್ರ ಕುಡಿಯುವ ನೀರಿಗೆ ಹಾಹಾಕಾರವುಂಟಾಗಿದೆ.
ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಿವಿದೆಡೆ ಕಳೆದ ಮೂರು ದಿನದಿಂದಲೂ ತಲೆದೂರಿರುವ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿದ ಸ್ಥಳೀಯ ಶಾಸಕರು, ಪಾಲಿಕೆ ಸದಸ್ಯರು ಹಾಗೂ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ವಿರೋಧಿಸಿ ಪಾಲಿಕೆ ಕಛೇರಿಗೆ ಮಾಜಿ ಶಾಸಕ ಎಂ ಕೆ ಸೋಮಶೇಖರ್ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
ಶ್ರೀರಂಗಪಟ್ಟಣದಲ್ಲಿರುವ ಕೃಷ್ಣರಾಜ ಸಾಗರ ಜಲಾಶಯ, ಹೆಚ್.ಡಿ.ಕೋಟೆ ತಾಲೂಕು ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಗಳು ಕೂಡ ಸಂಪೂರ್ಣ ಭರ್ತಿಯಾಗಿದ್ದು, ಇತ್ತೀಚಿಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆಗಮಿಸಿ ಬಾಗಿನವನ್ನು ಕೂಡ ನೀಡಿದ್ದಾರೆ. ಜಲಾಶಯಗಳು ಭರ್ತಿಯಾಗಿದ್ದರೂ ಮೈಸೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರವುಂಟಾಗಿದೆ.
ಮೈಸೂರು ನಗರದ ವಿವೇಕಾನಂದ ಬಡಾವಣೆಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ಇದರಿಂದ ನಾಗರೀಕರಿಗೆ ತೀವ್ರ ತೊಂದರೆಯಾಗಿದೆ.
ಕುಡಿಯಲು ಕಳೆದ ನಾಲ್ಕು ದಿನಗಳಿಂದ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶಗೊಂಡು ಖಾಲಿ ಬಿಂದಿಗೆಗಳನ್ನು ಹಿಡಿದು ಇಂದು ಬೆಳಿಗ್ಗೆ ದಿಢೀರನೆ ಶ್ರೀರಾಂಪುರ ಮುಖ್ಯ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಮುಖ್ಯ ರಸ್ತೆಯಲ್ಲಿಯೇ ಬಿಂದಿಗೆ ಹಿಡಿದು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ ಕಾರಣ ವಾಹನಗಳ ಸಂಚಾರಕ್ಕೆ ತೊಂದರೆಯುಂಟಾಯಿತು.
ನಮಗೆ ನೀರು ಬೇಕು, ಮೇಯರ್ ಅವರು ಸ್ಥಳಕ್ಕೆ ಬರಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ ಸೋಮಶೇಖರ್, ಶ್ರೀಧರ್, ಮಾಜಿ ಪಾಲಿಕೆ ಸದಸ್ಯ ಶಿವಣ್ಣ, ಮುಖಂಡರುಗಳಾದ ನವೀನ್ ಕುಮಾರ್, ವಿಜಯ್ ಕುಮಾರ್, ರಾಜೇಶ್, ಫಾರುಖ್, ಡೈರಿ ವೆಂಕಟೇಶ್, ಮಾಜಿ ಆಶ್ರಯ ಸಮಿತಿ ಸದಸ್ಯ ಮೂರ್ತಿ, ರಾಜೇಶ್, ರಾಮು, ಪ್ರಶಾಂತ್, ಗುಣಶೇಖರ್, ರಾಘವೇಂದ್ರ, ರಘುರಾಜೇ ಅರಸ್, ಸೋಮು ಸರಗೂರು, ವಸಂತ್, ಕಿರಣ್, ನಾಗಮಹದೇವ, ಚಿಕ್ಕಲಿಂಗು, ಪ್ರದೀಪ್, ರವಿ ಮತ್ತಿತರರು ಉಪಸ್ಥಿತರಿದ್ದರು. ಮಹಾಪೌರರು, ಪಾಲಿಕೆ ಆಯುಕ್ತರು ಬಂದು ಸಮಸ್ಯೆ ಬಗೆಹರಿಸುವ ವರೆಗೂ ಜಾಗ ಬಿಟ್ಟು ಹೋಗುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದು ಪ್ರತಿಭಟಿಸಿದರು.